ಸಿಎಂ-ಡಿಸಿಎಂ ‘ಬ್ರೇಕ್ ಫಾಸ್ಟ್ ಮೀಟಿಂಗ್’ಗೆ ಆರ್. ಅಶೋಕ್ ಟಾಂಗ್ – ಅದು ‘ಬ್ರೇಕ್ ಆಗೋ ಮೀಟಿಂಗ್’, ಬರೀ ಜಗಳ ಬಿಟ್ರೆ ಏನೂ ಆಗಲ್ಲ!

ಬೆಂಗಳೂರು ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ನಡುವಿನ ಮಾತುಕತೆ ಟೀಕಿಸಿದ ಬಿಜೆಪಿ ನಾಯಕ ಮತ್ತು ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಸಿಎಂ-ಡಿಸಿಎಂ ಭೇಟಿಯನ್ನು ‘ಬ್ರೇಕ್ ಫಾಸ್ಟ್ ಮೀಟಿಂಗ್’ ಎಂದು ವ್ಯಂಗ್ಯವಾಡಿದ ಅವರು, ಅದು ‘ಬ್ರೇಕ್ ಆಗೋ ಮೀಟಿಂಗ್’ ಎಂದು ಕಿಡಿಕಾರಿದರು.

ಅಲ್ಲಿ ಇಡ್ಲಿ, ದೋಸೆ, ಉಪ್ಪಿಟ್ಟು ಇಲ್ಲ, ಬರೀ ಜಗಳ ಬಿಟ್ರೆ ಏನು ಆಗಲ್ಲ ಎಂದು ಅಶೋಕ್ ಹೀಯಾಳಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರು ತಮ್ಮ ಸ್ಥಾನ ಬಿಟ್ಟುಕೊಡಲು ಸಿದ್ಧರಿಲ್ಲ, ಆದರೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಮಗೆ ಎರಡೂವರೆ ವರ್ಷಗಳ ಅವಧಿಗೆ ಮುಖ್ಯಮಂತ್ರಿ ಸ್ಥಾನ ನೀಡಬೇಕೆಂದು ಕೇಳುತ್ತಿದ್ದಾರೆ. ಇದೇ ಕಾರಣಕ್ಕೆ ಈ ಸರ್ಕಾರದಲ್ಲಿ ಬಿಕ್ಕಟ್ಟು ತಲೆದೋರಿದೆ ಎಂದು ಅವರು ಆರೋಪಿಸಿದ್ದಾರೆ.

ಕಾಂಗ್ರೆಸ್ ಹೈಕಮಾಂಡ್​​ಗೆ ಧಮ್ ಇದ್ರೆ, ಈ ಎರಡೂವರೆ ವರ್ಷ ಅಧಿಕಾರ ಹಂಚಿಕೆ ಮಾತುಕತೆ ಆಗಿದೆ ಎಂದು ಧೈರ್ಯವಾಗಿ ಅನೌನ್ಸ್ ಮಾಡಲಿ ಎಂದು ಅಶೋಕ್ ಸವಾಲು ಹಾಕಿದ್ದಾರೆ. ಕಾಂಗ್ರೆಸ್ ಪಕ್ಷದ ಹೈಕಮಾಂಡ್ ‘ವೀಕ್’ ಆಗಿದೆ. ನವೆಂಬರ್‌ನಿಂದಲೂ ಇದೇ ‘ಡ್ರಾಮಾ’ ನಡೆಯುತ್ತಿದೆ. ಹೈಕಮಾಂಡ್ ವೀಕ್ ಆಗಿರುವುದರಿಂದಲೇ ಸಿಎಂ ಮತ್ತು ಡಿಸಿಎಂ ಇಬ್ಬರೂ ಅವರ ಮೇಲೆ ‘ಸವಾರಿ’ ಮಾಡುತ್ತಿದ್ದಾರೆ ಎಂದು ಅವರು ಟೀಕಿಸಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಯಾವುದೇ ಅಭಿವೃದ್ಧಿ ಕೆಲಸಗಳು ಆಗಿಲ್ಲ. ರಸ್ತೆಗಳಲ್ಲಿ ಹಳ್ಳಗಳು ಬಿದ್ದಿವೆ. ಜೈಲುಗಳು ‘ವೈನ್ ಫ್ಯಾಕ್ಟರಿ’ಗಳಾಗಿವೆ ಎಂದು ಆರೋಪಿಸಿದರು. ಇವರು ತೊಲಗಲಿ ಎಂದು ಜನರೇ ಹೇಳುತ್ತಿದ್ದಾರೆ” ಎಂದು ಆರ್. ಅಶೋಕ್ ಅವರು ಕಾಂಗ್ರೆಸ್ ಸರ್ಕಾರದ ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ : ರೌಡಿ ಲಕ್ಷ್ಮಣ ಹತ್ಯೆಯ ಮೋಸ್ಟ್ ವಾಂಟೆಡ್ ಆರೋಪಿ ಕ್ಯಾಟ್ ರಾಜಾ ಅರೆಸ್ಟ್!

Btv Kannada
Author: Btv Kannada

Read More