ಮಂಡ್ಯ : ಜೆಡಿಎಸ್ ಭದ್ರಕೋಟೆ ಮಂಡ್ಯದಲ್ಲಿ ಈಗ ಬಂಡಾಯದ ಬಿಸಿ ಹೆಚ್ಚಾಗಿದೆ. ಕೆ.ಆರ್.ಪೇಟೆ ಜೆಡಿಎಸ್ ಶಾಸಕ ಹೆಚ್.ಟಿ ಮಂಜು ವಿರುದ್ಧ ಕಾರ್ಯಕರ್ತರ ಆಕ್ರೋಶ ಭುಗಿಲೆದ್ದಿದೆ. MLA ಹೆಚ್.ಟಿ ಮಂಜು ನಡೆಗೆ ಜೆಡಿಎಸ್ ಕಾರ್ಯಕರ್ತರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಶಾಸಕ ಹೆಚ್.ಟಿ ಮಂಜು ಕಾಂಗ್ರೆಸ್‌ನೊಂದಿಗೆ ಕಳ್ಳ ಮೈತ್ರಿ ಮತ್ತು ಒಳ ಒಪ್ಪಂದ ಮಾಡಿಕೊಂಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಜೆಡಿಎಸ್ ಮುಖಂಡರಾದ ಡಾಲು ರವಿ ಮತ್ತು ಬಿ.ಎಂ. ಕಿರಣ್ ಅವರು ಕೆ.ಆರ್.ಪೇಟೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಶಾಸಕ ಹೆಚ್.ಟಿ. ಮಂಜು ಅವರ ವಿರುದ್ಧ ಕಿಡಿಕಾರಿದ್ದಾರೆ. ಪಟ್ಟಣ ಪುರಸಭೆ ಚುನಾವಣೆಯ ಸಂದರ್ಭದಲ್ಲಿ ಜೆಡಿಎಸ್‌ಗೆ ಸ್ಪಷ್ಟ ಬಹುಮತವಿದ್ದರೂ, ಶಾಸಕರು ತಮ್ಮ ಅಧಿಕಾರ ದಾಹಕ್ಕಾಗಿ ಅಧಿಕಾರವನ್ನು ಕಾಂಗ್ರೆಸ್‌ಗೆ ಬಿಟ್ಟುಕೊಟ್ಟಿದ್ದಾರೆ.
‘ಕೈ’ ನಾಯಕರ ಜೊತೆ ಸೇರಿ ಒಳ ಒಪ್ಪಂದ ಮಾಡಿಕೊಳ್ಳುವ ಮೂಲಕ ಶಾಸಕರು ಜೆಡಿಎಸ್ ಪಕ್ಷಕ್ಕೆ ದ್ರೋಹ ಎಸಗಿದ್ದಾರೆ. ಇದು ಸ್ಥಳೀಯ ಹಲವು ಚುನಾವಣೆಗಳಲ್ಲಿ ನಡೆದಿದೆ. ಶಾಸಕರು ಕೆ.ಆರ್.ಪೇಟೆ ಕ್ಷೇತ್ರದಲ್ಲಿ ನಿಷ್ಠಾವಂತ ಕಾರ್ಯಕರ್ತರ ರಾಜಕೀಯ ಬೆಳವಣಿಗೆಗೆ ಅಡ್ಡಗಾಲು ಹಾಕುತ್ತಿದ್ದಾರೆ ಮತ್ತು ಅವರನ್ನು ತುಳಿಯುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಕೆಂಡ ಕಾರಿದ್ದಾರೆ. ಶಾಸಕ ಮಂಜು ಅವರ ಇಂತಹ ವರ್ತನೆಯಿಂದಾಗಿ ನಿಷ್ಠಾವಂತ ಕಾರ್ಯಕರ್ತರಿಗೆ ತೀವ್ರ ನೋವಾಗಿದೆ ಎಂದು JDS ಮುಖಂಡರಾದ ಡಾಲು ರವಿ & ಬಿ.ಎಂ.ಕಿರಣ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

JDS ಶಾಸಕ ಹೆಚ್.ಟಿ ಮಂಜು ವಿರೋಧಿ ಅಭಿಯಾನ ದಿನೇ ದಿನೇ ಹೆಚ್ಚಾಗ್ತಿದೆ. ನಾವು ಜೆಡಿಎಸ್ ಪಕ್ಷ ಬಿಟ್ಟಿಲ್ಲ. ನಾವು ಪಕ್ಷ ದ್ರೋಹ ಅಥವಾ ಪಕ್ಷ ವಿರೋಧಿ ಚಟುವಟಿಕೆಗಳನ್ನು ಮಾಡಿಲ್ಲ. ನಮಗೆ ಈಗಲೂ ಹೆಚ್.ಡಿ. ದೇವೇಗೌಡ, ಹೆಚ್.ಡಿ. ಕುಮಾರಸ್ವಾಮಿ, ಮತ್ತು ನಿಖಿಲ್ ಕುಮಾರಸ್ವಾಮಿ ಅವರೇ ನಾಯಕರು. ನಾವು ವ್ಯಕ್ತಿ ಪೂಜೆ ಮಾಡಲ್ಲ, ಪಕ್ಷ ಪೂಜೆ ಮಾಡುತ್ತೇವೆ ಎಂದು ಡಾಲು ರವಿ & ಬಿ.ಎಂ.ಕಿರಣ್ ಸ್ಪಷ್ಟಪಡಿಸಿದ್ದಾರೆ. ಶಾಸಕರು ತಮ್ಮ ಬೆಂಬಲಿಗರನ್ನು ಎತ್ತಿಕಟ್ಟಿ, ತಮ್ಮ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ನಮ್ಮಲ್ಲಿ ತಪ್ಪಿದ್ದರೆ ಪಕ್ಷದ ನಾಯಕರು ನಮ್ಮನ್ನು ಉಚ್ಚಾಟನೆ ಮಾಡಲಿ. ನಮಗೆ ಉಚ್ಚಾಟನೆ ಮಾಡುವಂತೆ ಶಿಫಾರಸ್ಸು ಮಾಡಲು ಶಾಸಕರು ಯಾರು? ಎಂದು ಪ್ರಶ್ನಿಸಿದ್ದಾರೆ.
ಶಾಸಕ ಹೆಚ್.ಟಿ. ಮಂಜು ಅವರ ಒಳ ಒಪ್ಪಂದದಿಂದ ಕೆ.ಆರ್.ಪೇಟೆಯಲ್ಲಿ ಜೆಡಿಎಸ್‌ಗೆ ತೀವ್ರ ಹಾನಿಯಾಗಲಿದೆ. ಶಾಸಕರು ಶಾಸಕರಾಗಿ ಕೆಲಸ ಮಾಡಲಿ, ನಾವು ಅವರಿಗೆ ಬೆಲೆ ಕೊಡುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜೆಡಿಎಸ್‌ನ ನಿಷ್ಠಾವಂತ ಮುಖಂಡರೇ ಶಾಸಕರ ವಿರುದ್ಧ ಬಹಿರಂಗವಾಗಿ ತಿರುಗಿಬಿದ್ದಿರುವುದು ಮಂಡ್ಯ ರಾಜಕೀಯದಲ್ಲಿ ಹೊಸ ಸಂಚಲನ ಸೃಷ್ಟಿಸಿದೆ.







