ಬೆಂಗಳೂರು : ರಾಜ್ಯ ರಾಜಕೀಯದಲ್ಲಿ ಸಿಎಂ ಬದಲಾವಣೆ ಬಗ್ಗೆ ಚರ್ಚೆ ಜೋರಾಗಿದ್ದು, ಇದೀಗ ಡಿಕೆ ಶಿವಕುಮಾರ್ ಪರ ರಾಜ್ಯ ಒಕ್ಕಲಿಗರ ಸಂಘ ಅಖಾಡಕ್ಕಿಳಿದಿದೆ. ಡಿಕೆಶಿ ‘ಸಿಎಂ’ ಕನಸಿಗೆ ಒಕ್ಕಲಿಗರ ಸಂಘದ ನಾಯಕರು ಸಾಥ್ ನೀಡಿದ್ದಾರೆ.

ಡಿಕೆಶಿ ಅವರಿಗೆ ಮುಖ್ಯಮಂತ್ರಿಯಾಗಲು ಒಮ್ಮೆ ಅವಕಾಶ ನೀಡಲಿ, ಕಾಂಗ್ರೆಸ್ ಹೈಕಮಾಂಡ್ ನಾಯಕರು ಡಿಕೆಶಿಗೆ ಅವಕಾಶ ನೀಡಬೇಕು. ಒಕ್ಕಲಿಗ ಜನಾಂಗಕ್ಕೆ ಅನ್ಯಾಯವಾಗಲು ನಾವುಗಳು ಬಿಡೋದಿಲ್ಲ ಎಂದು ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಎಲ್. ಶ್ರೀನಿವಾಸ್ ಎಚ್ಚರಿಕೆ ಕೊಟ್ಟಿದ್ದಾರೆ.
2023ರ ಚುನಾವಣೆಯಲ್ಲಿ ಡಿಕೆಶಿ ಶ್ರಮದಿಂದಲೇ ಹೆಚ್ಚು ಸ್ಥಾನ ಗೆದ್ದಿದ್ದಾರೆ, ನಮ್ಮ ಕೈಗೆ ಪೆನ್ನು ಪೇಪರ್ ಕೊಡಿ ಅಂತ ರಾಜ್ಯದ ಜನತೆಗೆ ಮನವಿ ಮಾಡಿದ್ರು. ಡಿಕೆ ಶಿವಕುಮಾರ್ ಮಾತಿಗೆ ನಂಬಿಕೆ ಇಟ್ಟು ಕಾಂಗ್ರೆಸ್ಗೆ ಮತ ಹಾಕಿದ್ದಾರೆ, ಸಿದ್ದರಾಮಯ್ಯ ಅಧಿಕಾರ ಕೊಡಲ್ಲ ಅನ್ನೋ ಮಾತುಗಳು ಕೇಳಿ ಬರುತ್ತಿವೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಅವಕಾಶ ಕೊಡಲಿ. ಡಿಕೆ ಶಿವಕುಮಾರ್ ಅವರಿಗೆ ಮುಖ್ಯಮಂತ್ರಿಯಾಗಲು ಒಮ್ಮೆ ಅವಕಾಶ ನೀಡಲಿ ಎಂದು ಕಾಂಗ್ರೆಸ್ ಹೈಕಮಾಂಡ್ಗೆ ಒಕ್ಕಲಿಗರ ಸಂಘದ ಅಧ್ಯಕ್ಷ ಎಲ್.ಶ್ರೀನಿವಾಸ್ ಮನವಿ ಮಾಡಿದ್ದಾರೆ.

ಡಿಕೆಶಿ ಸಿಎಂ ಕೂಗು ದಿನೇ ದಿನೇ ಒಕ್ಕಲಿಗ ಸಮುದಾಯದಲ್ಲಿ ಹೆಚ್ಚಾಗ್ತಿದೆ. ಒಕ್ಕಲಿಗ ಪ್ರಾಬಲ್ಯದ ಕ್ಷೇತ್ರಗಳಲ್ಲಿ ಡಿಕೆಶಿ ಸಿಎಂ ಆಗ್ತಾರೆ ಅನ್ನೋ ಆಸೆ ಇತ್ತು. ಇದೇ ಉದ್ದೇಶದಿಂದ ಹಳೇ ಮೈಸೂರು ಭಾಗದಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನ ಗೆದ್ದಿದೆ, ನ್ಯಾಯುತವಾಗಿ ಮೊದಲನೇ ಅವಧಿಯಲ್ಲೇ ಡಿಕೆಶಿ ಸಿಎಂ ಆಗಬೇಕಿತ್ತು. ಎರಡನೇ ಅವಧಿಗೆ ಸಿಎಂ ಆಗ್ತಾರೆ ಅನ್ನೋ ತಾಳ್ಮೆಯಿಂದ ಸುಮ್ಮನಿದ್ದೆವು, ಈಗ ಸಿಎಂ ಬದಲಾವಣೆ ವಿಚಾರದಲ್ಲಿ ಸಾಕಷ್ಟು ಮಾತುಗಳು ಕೇಳಿ ಬರುತ್ತಿವೆ. ನಾವು ಇನ್ನೊಬ್ಬರ ಅವಕಾಶ ಕೇಳ್ತಿಲ್ಲ, ನಮ್ಮಜನಾಂಗಕ್ಕೆ ನ್ಯಾಯ ಸಿಗಬೇಕು. ನಮ್ಮ ಸಮುದಾಯಕ್ಕೆ ಅನ್ಯಾಯವಾದರೆ ಯಾವುದೇ ಕಾರಣಕ್ಕೂ ಸಹಿಸಲ್ಲ, ಕೂಡಲೇ ಕಾಂಗ್ರೆಸ್ ಹೈಕಮಾಂಡ್ ನಾಯಕರು ಕೊಟ್ಟ ಮಾತಿನಂತೆ ನಡೆಯಲಿ. ಡಿಕೆ ಶಿವಕುಮಾರ್ ಪಟ್ಟ ಶ್ರಮಕ್ಕೆ ಕೂಲಿ ಕೊಡಿ ಎಂದು ಒಕ್ಕಲಿಗರ ಸಂಘ ಮನವಿ ಮಾಡಿದ್ದಾರೆ.

ಡಿ.ಕೆ. ಶಿವಕುಮಾರ್ ಅವರು ಕಾಂಗ್ರೆಸ್ ಪಕ್ಷಕ್ಕಾಗಿ ಜೈಲಿಗೂ ಹೋಗಿ ಬಂದಿದ್ದಾರೆ. 2023ರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಅಧಿಕಾರಕ್ಕೆ ಬರಲು ಹಗಲಿರುಳು ಶ್ರಮಿಸಿದ್ದಾರೆ. ಅವರ ಶ್ರಮದಿಂದಲೇ ಇಂದು ಕಾಂಗ್ರೆಸ್ ಅಧಿಕಾರದಲ್ಲಿದೆ. ಆದಿಚುಂಚನಗಿರಿ ಮಠದ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಸೇರಿ ಇಡೀ ಒಕ್ಕಲಿಗ ಸಮುದಾಯ ಡಿಕೆಶಿ ಜೊತೆ ನಿಂತಿದೆ. ಕೆಪಿಸಿಸಿ ಅಧ್ಯಕ್ಷರಾಗಿರುವವರೇ ಮುಖ್ಯಮಂತ್ರಿಯಾಗುವುದು ಪಕ್ಷದಲ್ಲಿ ಒಂದು ಪದ್ಧತಿ. ಆದರೆ, ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಸಿದ್ದರಾಮಯ್ಯ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡಲಾಯಿತು. ಆಗ ಒಕ್ಕಲಿಗ ಸಮುದಾಯ ಕೂಡ ಸಂಪೂರ್ಣ ಬೆಂಬಲ ನೀಡಿತ್ತು. ಸಿದ್ದರಾಮಯ್ಯ ಅವರು ಈಗಾಗಲೇ ಎರಡೂವರೆ ವರ್ಷಗಳ ಅವಧಿಯನ್ನು ಪೂರ್ಣಗೊಳಿಸಿದ್ದಾರೆ. ಅವರು ಉತ್ತಮ ಹೃದಯ ಹೊಂದಿದವರು. ಈಗ ಅವರು ಡಿ.ಕೆ. ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡಬೇಕು.
ಡಿಕೆ ಶಿವಕುಮಾರ್ ಅವರಿಗೆ ಅನ್ಯಾಯವಾದರೆ ಮುಂಬರುವ ದಿನಗಳಲ್ಲಿ ಇಡೀ ಒಕ್ಕಲಿಗ ಸಮುದಾಯ ತಕ್ಕ ಪಾಠ ಕಲಿಸಲಿದೆ ಎಂದು ಒಕ್ಕಲಿಗ ಸಂಘದ ನಾಯಕರು ಎಚ್ಚರಿಕೆ ನೀಡಿದ್ದಾರೆ. ಡಿಕೆಶಿಗೆ ಮುಖ್ಯಮಂತ್ರಿ ಸ್ಥಾನ ನೀಡಬೇಕು ಎನ್ನುವುದು ನಮ್ಮ ಸಮುದಾಯದ ಏಕೈಕ ಬೇಡಿಕೆಯಾಗಿದೆ. ಈ ಮೂಲಕ ನಾಯಕರು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮುಖ್ಯಮಂತ್ರಿ ಸ್ಥಾನ ಹಂಚಿಕೆಯ ವಿಚಾರವನ್ನು ಬಹಿರಂಗವಾಗಿ ಮುನ್ನೆಲೆಗೆ ತಂದಿದ್ದಾರೆ.
ಇದನ್ನೂ ಓದಿ : ಕವೀಶ್ ಶೆಟ್ಟಿ-ಮೇಘ ಶೆಟ್ಟಿ ಅಭಿನಯದ “ಓ.ಎಲ್.ಸಿ” ಚಿತ್ರ ನ.28ಕ್ಕೆ ರಿಲೀಸ್!







