ಬೆಂಗಳೂರು : ಕಾಂಗ್ರೆಸ್ ಪಕ್ಷದ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಒಂದು ವೇಳೆ ರಾಜಕೀಯಕ್ಕೆ ಪ್ರವೇಶ ಮಾಡದೇ ಇದ್ದಿದ್ದರೆ, ಆ ಸಂದರ್ಭದಲ್ಲೇ ದೇಶವು ‘ಕಾಂಗ್ರೆಸ್ ಮುಕ್ತ’ವಾಗುತ್ತಿತ್ತು ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಅವರು ಮಹತ್ವದ ಹೇಳಿಕೆ ನೀಡಿದ್ದಾರೆ. ಈ ಮೂಲಕ ಅವರು ಕಾಂಗ್ರೆಸ್ ಪಕ್ಷಕ್ಕೆ ಸೋನಿಯಾ ಗಾಂಧಿಯವರ ಕೊಡುಗೆಯನ್ನು ಬಲವಾಗಿ ಪ್ರತಿಪಾದಿಸಿದ್ದಾರೆ.

ಸಚಿವ ಜಾರ್ಜ್ ಅವರು ಸೋನಿಯಾ ಗಾಂಧಿಯವರು ಪಕ್ಷದ ನೇತೃತ್ವ ವಹಿಸಿಕೊಳ್ಳುವ ಹಿಂದಿನ ಪರಿಸ್ಥಿತಿಯನ್ನು ವಿವರಿಸಿದರು. “ಸೀತಾರಾಮ ಕೇಸರಿ ಅವರು ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನವನ್ನು ತ್ಯಜಿಸಿದ ಬಳಿಕ ಪಕ್ಷವು ತೀವ್ರ ಕಷ್ಟದ ದಿನಗಳನ್ನು ಎದುರಿಸುತ್ತಿತ್ತು. ರಾಜೀವ್ ಗಾಂಧಿಯವರ ನಿಧನದ ನೋವಿನಲ್ಲಿದ್ದ ಸೋನಿಯಾ ಗಾಂಧಿ ಅವರು ಆರಂಭದಲ್ಲಿ ಪಕ್ಷದ ನೇತೃತ್ವ ವಹಿಸಿಕೊಳ್ಳಲು ಹಿಂದೇಟು ಹಾಕಿದ್ದರು” ಎಂದು ಜಾರ್ಜ್ ಹೇಳಿದ್ದಾರೆ.
ಆದರೆ, ಕಾಂಗ್ರೆಸ್ ಪಕ್ಷದ ಸ್ಥಿತಿಯನ್ನು ಗಮನಿಸಿ, ಎಲ್ಲ ಹಿರಿಯ ನಾಯಕರ ಕೋರಿಕೆಯ ಮೇರೆಗೆ ಅವರು ಕಠಿಣ ನಿರ್ಧಾರ ತೆಗೆದುಕೊಂಡು ಪಕ್ಷದ ನೇತೃತ್ವ ವಹಿಸಿಕೊಂಡರು. ಅವರು ಅಂದು ಆ ನಿರ್ಧಾರ ತೆಗೆದುಕೊಳ್ಳದೇ ಇದ್ದಿದ್ದರೆ, ಬಿಜೆಪಿಯವರು ಹೇಳುವ ‘ಕಾಂಗ್ರೆಸ್ ಮುಕ್ತ ಭಾರತ’ವು ಅಂದೇ ವಾಸ್ತವವಾಗುತ್ತಿತ್ತು ಎಂದು ಜಾರ್ಜ್ ಒತ್ತಿ ಹೇಳಿದರು.

ಈ ಕುರಿತು ವರದಿ ಮಾಡುವ ಮಾಧ್ಯಮಗಳು ತಮ್ಮ ಹೇಳಿಕೆಗಳನ್ನು ತಿರುಚಿ, “ಸೋನಿಯಾ ಗಾಂಧಿ ಬಾರದೆ ಕಾಂಗ್ರೆಸ್ ಮುಕ್ತ ಭಾರತ” ಎಂಬ ಅರ್ಥದಲ್ಲಿ ಸುದ್ದಿ ಪ್ರಕಟಿಸುತ್ತಿವೆ ಎಂದು ಸಚಿವ ಕೆ.ಜೆ.ಜಾರ್ಜ್ ಆಕ್ಷೇಪ ವ್ಯಕ್ತಪಡಿಸಿದರು. “ದಯವಿಟ್ಟು ನಾನು ಹೇಳಿದ ಯಥಾವತ್ತಾದ ಅಭಿಪ್ರಾಯವನ್ನು ಪ್ರಕಟಿಸಿ” ಎಂದು ಅವರು ಮಾಧ್ಯಮದವರಿಗೆ ಮನವಿ ಮಾಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಐದು ವರ್ಷ ಪೂರ್ಣಾವಧಿಗೆ ಸಿಎಂ ಆಗಿರುತ್ತಾರೆಯೇ ಎಂಬ ಪ್ರಶ್ನೆಗೆ ಜಾರ್ಜ್ ಅವರು ನೇರ ಉತ್ತರ ನೀಡಲು ನಿರಾಕರಿಸಿದರು. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗಿನ ಮಾತುಕತೆ ಕುರಿತು ಪ್ರತಿಕ್ರಿಯಿಸಿದ ಜಾರ್ಜ್, “ನಾನು ಅಲ್ಲಿ ಇರಲಿಲ್ಲವಾದ್ದರಿಂದ ಆ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ” ಎಂದು ಹೇಳಿದರು. ಈ ನಡುವೆ, “ಬಿಜೆಪಿ ನಾಯಕರಿಗೆ ಕಾಂಗ್ರೆಸ್ ಸರ್ಕಾರದ ಒಳ್ಳೆಯ ಕಾರ್ಯಗಳು ಕಾಣಿಸುತ್ತಲೇ ಇಲ್ಲ” ಎಂದು ಹೇಳುವ ಮೂಲಕ ಅವರು ವಿರೋಧ ಪಕ್ಷದ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.
ಇದನ್ನೂ ಓದಿ : ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಗೆ ಹುಟ್ಟುಹಬ್ಬದ ಸಂಭ್ರಮ – ಪ್ರಧಾನಿ ಮೋದಿ ಶುಭ ಹಾರೈಕೆ.. ಆಡಳಿತಕ್ಕೆ ಮೆಚ್ಚುಗೆ!







