ಬೆಂಗಳೂರು : ನಿವೃತ್ತ ಡಿಜಿಪಿ ಓಂ ಪ್ರಕಾಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ (CCB) ಪೊಲೀಸರು ಸಲ್ಲಿಸಿರುವ ಚಾರ್ಜ್ ಶೀಟ್ನಲ್ಲಿ ಮಹತ್ವದ ಅಂಶಗಳು ಬೆಳಕಿಗೆ ಬಂದಿವೆ. ಪ್ರಕರಣದ ಆರೋಪಿಯಾದ ಪತ್ನಿ ಪಲ್ಲವಿ ಅವರನ್ನು ಈ ಮೊದಲು ‘ಮಾನಸಿಕ ಅಸ್ವಸ್ಥೆ’ ಎಂದು ಹೇಳಲಾಗಿತ್ತು. ಆದರೆ, ಪ್ರಸ್ತುತ ಅವರು ಮಾನಸಿಕವಾಗಿ ಸಂಪೂರ್ಣ ಆರೋಗ್ಯವಾಗಿದ್ದಾರೆ ಎಂದು ನಿಮ್ಹಾನ್ಸ್ (NIMHANS) ವೈದ್ಯರು ದೃಢಪಡಿಸಿದ್ದಾರೆ.

ಆರೋಪಿತೆ ಪಲ್ಲವಿ ಅವರನ್ನು ನಿಮ್ಹಾನ್ಸ್ ಆಸ್ಪತ್ರೆಯಲ್ಲಿ 14 ದಿನಗಳ ಕಾಲ ತೀವ್ರ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿತ್ತು. ಈ ಅವಧಿಯಲ್ಲಿ ವೈದ್ಯರು ವೈಯಕ್ತಿಕ ವಿಚಾರಣೆ ನಡೆಸಿದ್ದಾರೆ. ಸಿಸಿಟಿವಿ ಸರ್ವೆಲೆನ್ಸ್, ಐಕ್ಯೂ ಟೆಸ್ಟ್, ಪ್ರಶ್ನೋತ್ತರ ಪರೀಕ್ಷೆಗಳು ಸೇರಿದಂತೆ ಹಲವು ವೈಜ್ಞಾನಿಕ ಪರೀಕ್ಷೆಗಳನ್ನು ನಡೆಸಿದ ನಂತರ, ಪಲ್ಲವಿ ಅವರು ಎಲ್ಲಾ ಪರೀಕ್ಷೆಗಳಲ್ಲಿಯೂ ‘ಫಿಟ್ ಆ್ಯಂಡ್ ಫೈನ್’ ಎಂದು ವೈದ್ಯಕೀಯ ವರದಿಯಲ್ಲಿ ದೃಢಪಡಿಸಿದ್ದಾರೆ. ಈ ವೈದ್ಯರ ವರದಿಯನ್ನೇ ಪ್ರಮುಖ ಸಾಕ್ಷ್ಯವಾಗಿ ಉಲ್ಲೇಖಿಸಿ ಸಿಸಿಬಿ ಪೊಲೀಸರು ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.

ಪ್ರಕರಣದಲ್ಲಿ ಮತ್ತೊಂದು ಪ್ರಮುಖ ಸಾಕ್ಷಿಯನ್ನು ಸಿಸಿಬಿ ಕಲೆಹಾಕಿದೆ. ಡಿಜಿಪಿ ಓಂ ಪ್ರಕಾಶ್ ಅವರನ್ನು ಹತ್ಯೆ ಮಾಡಿದ ನಂತರ ಪತ್ನಿ ಪಲ್ಲವಿ, “I HAVE KILLED MONSTER” ಎಂದು ಹೇಳಿರುವ ವಾಯ್ಸ್ ನೋಟ್ ಅನ್ನು ಕೆಲವರಿಗೆ ಕಳುಹಿಸಿದ್ದರು. ಸಿಸಿಬಿ ಪೊಲೀಸರು ಈ ವಾಯ್ಸ್ ನೋಟ್ಅನ್ನು ಎಫ್ಎಸ್ಎಲ್ (FSL) ಪರೀಕ್ಷೆಗೆ ಕಳುಹಿಸಿದ್ದರು. ಇದೀಗ ಎಫ್ಎಸ್ಎಲ್ , ಆ ವಾಯ್ಸ್ ನೋಟ್ನಲ್ಲಿರುವ ಧ್ವನಿ ಮತ್ತು ಪಲ್ಲವಿ ಅವರ ಧ್ವನಿ ತಾಳೆಯಾಗಿರುವುದು ದೃಢಪಟ್ಟಿದೆ. ಈ ವರದಿಯು ಪ್ರಕರಣದ ಬಲವನ್ನು ಹೆಚ್ಚಿಸಿದೆ.
ಕಳೆದ ಎಂಟು ತಿಂಗಳುಗಳಿಂದ ಜೈಲಿನಲ್ಲಿರುವ ಪಲ್ಲವಿ ಅವರ ಪ್ರಕರಣದ ಟ್ರಯಲ್ ನ್ಯಾಯಾಲಯದಲ್ಲಿ ಶುರುವಾಗಿದೆ. ವಿಚಾರಣೆ ಮುಗಿಯುವವರೆಗೆ ಆರೋಪಿಗೆ ಜಾಮೀನು ಸಿಗುವುದಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ : ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಗೆ ಹುಟ್ಟುಹಬ್ಬದ ಸಂಭ್ರಮ – ಪ್ರಧಾನಿ ಮೋದಿ ಶುಭ ಹಾರೈಕೆ.. ಆಡಳಿತಕ್ಕೆ ಮೆಚ್ಚುಗೆ!







