ಹಾಸನ : ರಾಜ್ಯ ರಾಜಕಾರಣದ ಕುರಿತು ಮತ್ತು ಕಾಂಗ್ರೆಸ್‌ನಲ್ಲಿನ ಮುಖ್ಯಮಂತ್ರಿ ಗಾದಿಯ ಸಂಘರ್ಷದ ಬಗ್ಗೆ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರು ಮಹತ್ವದ ಹೇಳಿಕೆ ನೀಡಿದ್ದಾರೆ. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಬೇಕು ಎಂಬ ಆಸೆ ಮಠಕ್ಕೂ ಇದೆ ಎಂದು ಸ್ವಾಮೀಜಿ ತಮ್ಮ ಮನದಾಳವನ್ನು ವ್ಯಕ್ತಪಡಿಸಿದ್ದಾರೆ.
ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಕುಂದೂರಿನಲ್ಲಿ ಮಾತನಾಡಿದ ಸ್ವಾಮೀಜಿಗಳು, ಪ್ರಸ್ತುತ ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳನ್ನು ಮಾಧ್ಯಮಗಳ ಮೂಲಕ ಗಮನಿಸುತ್ತಿರುವುದಾಗಿ ತಿಳಿಸಿದರು. ಡಿಕೆಶಿ ಅವರು ಸಿಎಂ ಆಗಬೇಕು ಎನ್ನುವ ಆಸೆ ನಮ್ಮ ಮಠಕ್ಕೂ ಇದೆ. ಇದು ಕೇವಲ ನಮ್ಮ ಆಸೆಯಲ್ಲ, ಹಲವಾರು ಭಕ್ತರು ನಮ್ಮ ಬಳಿ ಬಂದು ಈ ಕುರಿತು ತಮ್ಮ ಆಸೆಯನ್ನು ವ್ಯಕ್ತಪಡಿಸಿದ್ದಾರೆ. ಸಾವಿರಾರು ಭಕ್ತರು ಕರೆ ಮಾಡಿ ಕೂಡ ಇದನ್ನೇ ಹೇಳುತ್ತಾರೆ, ಎಂದು ಸ್ವಾಮೀಜಿ ನುಡಿದರು.

ಡಿ.ಕೆ. ಶಿವಕುಮಾರ್ ಒಬ್ಬ ಶಿಸ್ತಿನ ಸಿಪಾಯಿ. ಪಕ್ಷದ ಏಳಿಗೆಗಾಗಿ ಅವರು ಅಪಾರವಾಗಿ ದುಡಿದಿದ್ದಾರೆ, ಎಂದು ಡಿಕೆಶಿ ಅವರ ಕಾರ್ಯವೈಖರಿಯನ್ನು ಶ್ಲಾಘಿಸಿದರು. ಕಾಂಗ್ರೆಸ್‌ನಲ್ಲಿ ಕೇಳಿಬರುತ್ತಿರುವ ‘ಎರಡೂವರೆ ವರ್ಷಗಳ’ ಅಧಿಕಾರ ಹಂಚಿಕೆ ವಿಚಾರವನ್ನು ಜನರು ಬಹಿರಂಗವಾಗಿ ಚರ್ಚೆ ಮಾಡುತ್ತಿದ್ದಾರೆ. ಡಿಕೆಶಿಗೆ ರಾಜ್ಯ ರಾಜಕಾರಣದ ‘ಒಳಸುಳಿ’ಗಳು ಸಂಪೂರ್ಣವಾಗಿ ತಿಳಿದಿವೆ ಎಂದು ಶ್ರೀಗಳು ವಿಶ್ವಾಸ ವ್ಯಕ್ತಪಡಿಸಿದರು. ಡಿಕೆಶಿ ಅವರು ಸಿಎಂ ಆಕಾಂಕ್ಷಿ ಆಗಿರುವ ಕುರಿತು ಪ್ರಸ್ತುತ ಉಪಮುಖ್ಯಮಂತ್ರಿಯಾಗಿರುವ ಡಿಕೆಶಿ ಅವರು ತಮ್ಮೊಂದಿಗೆ ಯಾವುದೇ ಮಾತುಕತೆ ನಡೆಸಿಲ್ಲ ಎಂದು ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದ್ದಾರೆ.
ಇದನ್ನೂ ಓದಿ : KSRTC ಬಸ್ ಚಾಲಕನ ನಿರ್ಲಕ್ಷ್ಯ – ಡಿವೈಡರ್ ಹತ್ತಿದ ಬಸ್.. ಪ್ರಯಾಣಿಕರು ಪಾರು!







