ಬೆಂಗಳೂರು : ರಾಜೀವ್ ಗಾಂಧಿ ವೃತ್ತದಿಂದ ಸ್ಲಂಬೋರ್ಡ್‌ವರೆಗೆ ಹಾದುಹೋಗುವ ಶೇಷಾದ್ರಿಪುರಂ ಪ್ಲಾಟ್‌ಫಾರಂ ರಸ್ತೆಯ ಒಂದು ಬದಿಯಲ್ಲಿ ನಡೆಯುತ್ತಿರುವ ಚರಂಡಿ ಕಾಮಗಾರಿಯ ಗುಣಮಟ್ಟದ ಕುರಿತು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಈ ಕಾಮಗಾರಿಯು ಸಂಪೂರ್ಣವಾಗಿ ಅವೈಜ್ಞಾನಿಕವಾಗಿದೆ ಮತ್ತು ಸಾರ್ವಜನಿಕರಿಗೆ ಯಾವುದೇ ಪ್ರಯೋಜನಕ್ಕೆ ಬರುವುದಿಲ್ಲ ಎಂದು ಆರೋಪಿಸಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳು ಮತ್ತು ಗುತ್ತಿಗೆದಾರರ ವಿರುದ್ಧ ದೂರು ದಾಖಲಾಗಿದೆ.

ಸ್ವಾತಿ ಹೋಟೆಲ್ ಮತ್ತು ಅಪೋಲೋ ಆಸ್ಪತ್ರೆ ಮುಂಭಾಗ ನಡೆಯುತ್ತಿರುವ ಈ ಚರಂಡಿ ಕಾಮಗಾರಿಯಲ್ಲಿ ಹಲವು ಲೋಪಗಳು ಕಂಡುಬಂದಿವೆ. ದೂರಿನ ಪ್ರಮುಖ ಅಂಶಗಳು. ರಸ್ತೆಯು ಅಗಲ ಮತ್ತು ನೇರವಾಗಿದ್ದರೂ ಸಹ, ಚರಂಡಿಯ ಗೋಡೆಗಳನ್ನು ಅಂಕುಡೊಂಕಾಗಿ ನಿರ್ಮಿಸಲಾಗುತ್ತಿದೆ. ಕೆಲವು ಭಾಗಗಳಲ್ಲಿ ಚರಂಡಿಯ ಗೋಡೆಗಳು ದಪ್ಪನಾಗಿದ್ದರೆ, ಇನ್ನು ಕೆಲವು ಕಡೆ ಅತಿ ತೆಳುವಾಗಿವೆ. ಈಗಾಗಲೇ ಇಂತಹ ಅಸಮರ್ಪಕ ಕಾಮಗಾರಿಗಳಿಂದ ಅಪಘಾತಗಳು ಸಂಭವಿಸಿರುವ ಹಿನ್ನೆಲೆಯಲ್ಲಿ, ಈ ಕಾಮಗಾರಿಯೂ ಕೂಡ ಯಾವುದೇ ಕ್ಷಣದಲ್ಲಿ ಕುಸಿದು ಜೀವಹಾನಿ ಮತ್ತು ಆಸ್ತಿ ಹಾನಿಗೆ ಕಾರಣವಾಗಬಹುದು ಎಂದು ದೂರಿನಲ್ಲಿ ಎಚ್ಚರಿಸಲಾಗಿದೆ.

ಗಾಂಧಿನಗರ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು, ಸಿಬ್ಬಂದಿಗಳು ಮತ್ತು ಗುತ್ತಿಗೆದಾರರು ಕರ್ತವ್ಯಲೋಪ ಎಸಗಿರುವುದು ಸ್ಪಷ್ಟವಾಗಿದೆ. ಟೆಂಡರ್ ಪ್ರಕ್ರಿಯೆ, ಕಾರ್ಯಾದೇಶ, ಪ್ರಗತಿ ಪರಿಶೀಲನೆ, ಗುಣಮಟ್ಟ ತಪಾಸಣೆ ಮತ್ತು ಬಿಲ್ ಪಾವತಿ ಹಂತಗಳಲ್ಲಿ ಸಮರ್ಪಕ ನಿರ್ವಹಣೆ ಇಲ್ಲದಿರುವುದು, ಪಾಲಿಕೆಯ ಅಧಿಕಾರಿಗಳು ಮತ್ತು ಗುತ್ತಿಗೆದಾರರ ನಡುವೆ ಒಳ ಒಪ್ಪಂದ ಮತ್ತು ಬೃಹತ್ ಭ್ರಷ್ಟಾಚಾರ ನಡೆದಿರುವ ಸಾಧ್ಯತೆಯನ್ನು ಸೂಚಿಸುತ್ತದೆ. ಈ ಅವೈಜ್ಞಾನಿಕ ಕಾಮಗಾರಿಯಿಂದ ಸಾರ್ವಜನಿಕರಿಗೆ ಮತ್ತು ನಗರದ ಮೂಲಸೌಕರ್ಯಕ್ಕೆ ಆಗುತ್ತಿರುವ ಸಮಸ್ಯೆಗಳು. ಕಳಪೆ ಗುಣಮಟ್ಟದಿಂದಾಗಿ ಸರ್ಕಾರದ ಬೊಕ್ಕಸಕ್ಕೆ ಹೊರೆ. ತ್ಯಾಜ್ಯ ನೀರು ಮತ್ತು ಮಳೆನೀರು ಹರಿಯುವಲ್ಲಿ ಅಡೆತಡೆ, ಇದರಿಂದಾಗಿ ಪ್ರವಾಹದ ಸಾಧ್ಯತೆ. ವಾಹನಗಳ ಸಂಚಾರಕ್ಕೆ ತೀವ್ರ ಅಡಚಣೆ ಮತ್ತು ಸಂಚಾರ ದಟ್ಟಣೆ.

ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಕೂಡಲೇ ಕ್ರಮಗಳನ್ನು ಕೈಗೊಳ್ಳುವಂತೆ ಸಂಬಂಧಪಟ್ಟ ಉನ್ನತ ಅಧಿಕಾರಿಗಳಲ್ಲಿ ಕೋರಿದ್ದಾರೆ. ಚರಂಡಿ ಕಾಮಗಾರಿಯ ಟೆಂಡರ್ ಪ್ರಕ್ರಿಯೆಯಿಂದ ಬಿಲ್ ಪಾವತಿವರೆಗೆ ಎಲ್ಲಾ ಹಂತಗಳನ್ನು ಕೂಲಂಕಷವಾಗಿ ತನಿಖೆಗೆ ಒಳಪಡಿಸುವುದು. ಈ ಅವ್ಯವಹಾರದಲ್ಲಿ ಶಾಮೀಲಾಗಿರುವ ಕಾರ್ಯನಿರ್ವಾಹಕ ಅಭಿಯಂತರರು ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಗುತ್ತಿಗೆದಾರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದು. ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ, ಕಾಮಗಾರಿಯ ಗುಣಮಟ್ಟವನ್ನು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವುದು. ಈ ಗಂಭೀರ ದೂರಿನ ಕುರಿತು ಬಿಬಿಎಂಪಿ/ಜಿಬಿಎ ಅಧಿಕಾರಿಗಳು ಹೇಗೆ ಪ್ರತಿಕ್ರಿಯಿಸುತ್ತಾರೆ ಮತ್ತು ಯಾವ ಕ್ರಮ ಕೈಗೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ : ಕರ್ನಾಟಕ ಪೊಲೀಸರೇ ತಲೆ ತಗ್ಗಿಸೋ ‘ರಾಬರಿ’ ಸ್ಟೋರಿ – ಚಿನ್ನಾಭರಣ ದೋಚಿದ್ದ PSIಗಳಾದ ಮಾಳಪ್ಪ ಚಿಪ್ಪಲಕಟ್ಟಿ, ಪ್ರವೀಣ್ ಕುಮಾರ್ ಅರೆಸ್ಟ್!







