ದಾವಣಗೆರೆ : ಕಾನೂನು ಪಾಲನೆ ಮಾಡಬೇಕಾದ ಪೊಲೀಸ್ ಅಧಿಕಾರಿಗಳೇ ದರೋಡೆ ನಡೆಸಿರುವುದು ರಾಜ್ಯ ಪೊಲೀಸ್ ಇಲಾಖೆಯನ್ನೇ ತಲೆತಗ್ಗಿಸುವಂತೆ ಮಾಡಿದೆ. ದಾವಣಗೆರೆಯಲ್ಲಿ ಅಧಿಕಾರ ದುರುಪಯೋಗಪಡಿಸಿಕೊಂಡು ಚಿನ್ನಾಭರಣ ದೋಚಿದ ಇಬ್ಬರು ಪೊಲೀಸ್ ಸಬ್ ಇನ್‌ಸ್ಪೆಕ್ಟರ್‌ಗಳು (PSI) ಮತ್ತು ಅವರಿಗೆ ನೆರವು ನೀಡಿದ ಇಬ್ಬರು ಸ್ಥಳೀಯ ಚಿನ್ನದ ವ್ಯಾಪಾರಿಗಳನ್ನು ಪೊಲೀಸರು ಬಂಧಿಸಿದ್ದಾರೆ. ದಾವಣಗೆರೆ ಪೂರ್ವ ವಲಯ ಐಜಿಪಿ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪಿಎಸ್‌ಐ ಮಾಳಪ್ಪ ಚಿಪ್ಪಲಕಟ್ಟಿ ಮತ್ತು ಪಿಎಸ್‌ಐ ಪ್ರವೀಣ್ ಕುಮಾರ್ ಈ ಕೃತ್ಯದ ಮುಖ್ಯ ಆರೋಪಿಗಳು.

ಕಾರವಾರ ಮೂಲದ ಆಭರಣ ತಯಾರಕ ವಿಶ್ವನಾಥ್ ಅಕ್ಕಸಾಲಿ. ಇವರು ದಾವಣಗೆರೆಯ ಚಿನ್ನದ ವ್ಯಾಪಾರಿಗಳಿಂದ ಗಟ್ಟಿ ಚಿನ್ನ ಪಡೆದು ಆಭರಣ ತಯಾರಿಸಿ ಕೊಡುತ್ತಿದ್ದರು. ನವೆಂಬರ್ 24ರ ಮಧ್ಯರಾತ್ರಿ 12.30ರ ಸುಮಾರಿಗೆ ವಿಶ್ವನಾಥ್ ಅವರು ಚಿನ್ನದ ಗಟ್ಟಿ ಮತ್ತು ಉಂಗುರಗಳೊಂದಿಗೆ ದಾವಣಗೆರೆ ಬಸ್ ನಿಲ್ದಾಣದಿಂದ ಹುಬ್ಬಳ್ಳಿಗೆ ತೆರಳಲು ಸಿದ್ಧರಾಗಿದ್ದರು. ಈ ಕುರಿತು ಖಚಿತ ಮಾಹಿತಿ ಪಡೆದಿದ್ದ ಇಬ್ಬರೂ ಪಿಎಸ್‌ಐಗಳು ಮಫ್ತಿಯಲ್ಲಿ ಬಸ್ ನಿಲ್ದಾಣಕ್ಕೆ ಆಗಮಿಸಿ ವಿಶ್ವನಾಥ್ ಅವರನ್ನು ಹಿಂಬಾಲಿಸಿದ್ದಾರೆ. ಕೊರಳಪಟ್ಟಿ ಹಿಡಿದು ಕೆಳಗಿಳಿಸಿ, ತಮ್ಮ ಐಡಿ ಕಾರ್ಡ್‌ಗಳನ್ನು ತೋರಿಸಿ ಪೊಲೀಸ್ ಅಧಿಕಾರಿಗಳು ಎಂದು ಬೆದರಿಸಿದ್ದಾರೆ. ಬಳಿಕ ಬಲವಂತವಾಗಿ ಅವರನ್ನು ಪೊಲೀಸ್ ಜೀಪ್‌ನಲ್ಲಿ ಕೂರಿಸಿಕೊಂಡು ಕೆಟಿಜೆ ನಗರ ಠಾಣೆಯವರೆಗೂ ಕರೆದೊಯ್ದಿದ್ದಾರೆ. ಅಲ್ಲಿಂದ ತಮ್ಮ ಖಾಸಗಿ ಕಾರಿನಲ್ಲಿ ಬೇರೆಡೆಗೆ ಕರೆದೊಯ್ದು, ನಿನ್ನ ಬಳಿ ಇರುವ ಚಿನ್ನದ ಗಟ್ಟಿ, ಆಭರಣಗಳನ್ನು ಕೊಟ್ಟರೆ ಬಿಡುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ. PSIಗಳ ಬೆದರಿಕೆಗೆ ಮಣಿದ ವಿಶ್ವನಾಥ್ ಅವರಿಂದ 76 ಗ್ರಾಂ ಚಿನ್ನದ ಗಟ್ಟಿ ಮತ್ತು 2.15 ಗ್ರಾಂ ತೂಕದ ಬೇಬಿ ಉಂಗುರವನ್ನು ಕಿತ್ತುಕೊಂಡು ಬಳಿಕ ಅವರನ್ನು ಬಸ್ ನಿಲ್ದಾಣದಲ್ಲಿ ಬಿಟ್ಟು ಹೋಗಿದ್ದಾರೆ.

ದರೋಡೆಗೆ ಒಳಗಾದ ವಿಶ್ವನಾಥ್ ಅವರು ತಕ್ಷಣ ಕೆಟಿಜೆ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣದ ತನಿಖೆ ನಡೆಸಿದ ಪೊಲೀಸರು ಇಬ್ಬರು ಪಿಎಸ್‌ಐಗಳನ್ನು ಬಂಧಿಸಿದ್ದಾರೆ. ಅಪರಾಧ ಕೃತ್ಯಕ್ಕೆ ಪಿಎಸ್‌ಐಗಳಿಗೆ ಮಾಹಿತಿ ನೀಡಿ, ಸಹಾಯ ಮಾಡಿದ್ದ ಆರೋಪದ ಮೇಲೆ ದಾವಣಗೆರೆ ಮೂಲದ ಚಿನ್ನದ ವ್ಯಾಪಾರಿಗಳಾದ ಸತೀಶ್ ರೇವಣ್ಕರ್ ಮತ್ತು ನಾಗರಾಜ್ ರೇವಣ್ಕರ್ ಅವರನ್ನೂ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳಿಂದ ದರೋಡೆಗೆ ಬಳಸಿದ್ದ ಕಾರು ಮತ್ತು ನಕಲಿ ಗನ್ ಅನ್ನು ವಶಕ್ಕೆ ಪಡೆಯಲಾಗಿದೆ. ಕೆಟಿಜೆ ನಗರ ಠಾಣೆಯಲ್ಲಿ ತಡರಾತ್ರಿಯವರೆಗೂ ಪಿಎಸ್‌ಐಗಳನ್ನು ವಿಚಾರಣೆ ನಡೆಸಲಾಗಿದೆ. ನಾಲ್ವರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.

ಇದನ್ನೂ ಓದಿ : ತುಮಕೂರಿಗೆ ಟಿಕೆಟ್ ತಗೊಂಡು ಶ್ರೀರಂಗಪಟ್ಟಣದಲ್ಲಿ ಇಳಿದ ಮಹಿಳೆ – ಪ್ರಶ್ನಿಸಿದ ಕಂಡಕ್ಟರ್ ಮೇಲೆಯೇ ಹಲ್ಲೆ!







