ಮಂಡ್ಯ : ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ‘ಶಕ್ತಿ ಯೋಜನೆ’ಯಡಿ ಉಚಿತ ಪ್ರಯಾಣದ ಸೌಲಭ್ಯವನ್ನು ದುರುಪಯೋಗಪಡಿಸಿಕೊಳ್ಳಲು ಯತ್ನಿಸಿದ ಮಹಿಳೆಯೊಬ್ಬರು, ಇದನ್ನು ಪ್ರಶ್ನಿಸಿದ ಕಂಡಕ್ಟರ್ ಮೇಲೆ ಸಾರ್ವಜನಿಕರ ಎದುರೇ ದೈಹಿಕ ಹಲ್ಲೆ ನಡೆಸಿದ ಘಟನೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ಬಸ್ ನಿಲ್ದಾಣದಲ್ಲಿ ನಡೆದಿದೆ.

ಮಹಿಳೆಯು ಮೈಸೂರಿನಿಂದ ತುಮಕೂರಿಗೆ ಪ್ರಯಾಣಿಸಲು ಟಿಕೆಟ್ ಪಡೆದಿದ್ದರು. ‘ಶಕ್ತಿ ಯೋಜನೆ’ಯ ನಿಯಮಗಳ ಪ್ರಕಾರ, ಮಹಿಳೆಯರು ತಾವು ಪಡೆದ ಟಿಕೆಟ್‌ನ ನಿಗದಿತ ತಲುಪುವ ಸ್ಥಳದಲ್ಲಿಯೇ ಇಳಿಯಬೇಕು. ಆದರೆ, ಈ ಮಹಿಳೆ ತುಮಕೂರಿಗೆ ತಲುಪುವ ಮೊದಲೇ, ಮಾರ್ಗಮಧ್ಯದ ಶ್ರೀರಂಗಪಟ್ಟಣದಲ್ಲಿ ಬಸ್‌ನಿಂದ ಇಳಿದಿದ್ದಾರೆ. ಇದನ್ನು ಗಮನಿಸಿದ ಕಂಡಕ್ಟರ್ ಅವರು, ಟಿಕೆಟ್ ನಿಯಮ ಉಲ್ಲಂಘನೆ ಮತ್ತು ಯೋಜನೆಯ ದುರುಪಯೋಗದ ಬಗ್ಗೆ ಮಹಿಳೆಯನ್ನು ಪ್ರಶ್ನಿಸಿದ್ದಾರೆ.

ಕಂಡಕ್ಟರ್ ಪ್ರಶ್ನಿಸುತ್ತಿದ್ದಂತೆ ಮಹಿಳೆ ಕೆರಳಿದ್ದು, ತೀವ್ರ ರಂಪಾಟ ನಡೆಸಿದ್ದಾರೆ. ಸಾರ್ವಜನಿಕರ ಎದುರೇ ಕಂಡಕ್ಟರ್ ಅವರೊಂದಿಗೆ ವಾಗ್ವಾದ ನಡೆಸಿದ ಮಹಿಳೆ, ಕಂಡಕ್ಟರ್‌ನನ್ನು ಎಳೆದಾಡಿ ಕುತ್ತಿಗೆಗೆ ಕೈ ಹಾಕಿ ಹಲ್ಲೆ ಮಾಡಿದ್ದಾರೆ. ಕಂಡಕ್ಟರ್ ಆಕೆಯನ್ನು ಟಿಸಿ ಬಳಿ ಕರೆದೊಯ್ಯಲು ಯತ್ನಿಸಿದಾಗಲೂ ಮಹಿಳೆಯ ದೌರ್ಜನ್ಯ ಮುಂದುವರಿದಿದೆ. ಸ್ಥಳದಲ್ಲಿದ್ದ ಕೆಲ ಪ್ರಯಾಣಿಕರು ಮತ್ತು ಸಾರ್ವಜನಿಕರು ಈ ಘಟನೆಯನ್ನು ತಮ್ಮ ಮೊಬೈಲ್‌ನಲ್ಲಿ ವಿಡಿಯೋ ಮಾಡಲು ಪ್ರಾರಂಭಿಸುತ್ತಿದ್ದಂತೆ, ಆ ಮಹಿಳೆ ತಕ್ಷಣ ಅಲ್ಲಿಂದ ಕಾಲ್ಕಿತ್ತಿದ್ದಾಳೆ.

ಈ ರಂಪಾಟದ ವಿಡಿಯೋ ತುಣುಕುಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಘಟನೆ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ‘ಶಕ್ತಿ ಯೋಜನೆ’ಯನ್ನು ಈ ರೀತಿ ದುರುಪಯೋಗಪಡಿಸಿಕೊಳ್ಳುತ್ತಿರುವ ಮತ್ತು ಕರ್ತವ್ಯ ನಿರತ ಸಿಬ್ಬಂದಿ ಮೇಲೆ ಹಲ್ಲೆ ಮಾಡುತ್ತಿರುವ ಮಹಿಳೆಯರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಇದನ್ನೂ ಓದಿ : ಪ್ರೀತಿಸಿ ಮದುವೆಯಾಗಿದ್ದ ಮಹಿಳೆಯ ದಾರುಣ ಅಂತ್ಯ.. ಪತಿ ಕಿರುಕುಳಕ್ಕೆ ಬೇಸತ್ತು ಪತ್ನಿ ಸೂಸೈಡ್ ?- ಮಗುವಿನಿಂದ ಹೊರಬಿದ್ದ ಸತ್ಯ ಅದೇನಾ?







