ಪ್ರೀತಿಸಿ ಮದುವೆಯಾಗಿದ್ದ ಮಹಿಳೆಯ ದಾರುಣ ಅಂತ್ಯ.. ಪತಿ ಕಿರುಕುಳಕ್ಕೆ ಬೇಸತ್ತು ಪತ್ನಿ ಸೂಸೈಡ್ ?- ಮಗುವಿನಿಂದ ಹೊರಬಿದ್ದ ಸತ್ಯ ಅದೇನಾ?

ಬೆಂಗಳೂರು : ಗೋವಿಂದರಾಜನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನವೆಂಬರ್ 22 ರಂದು ರೇಖಾ ಮಾಯಪ್ಪ ನಂದಿ (25) ಎಂಬ ಮಹಿಳೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪತಿ ಮಾಯಪ್ಪ ಕುಡಿದು ಬಂದು ನಿರಂತರವಾಗಿ ಕಿರುಕುಳ ನೀಡಿ, ವರದಕ್ಷಿಣೆಗಾಗಿ ಪೀಡಿಸುತ್ತಿದ್ದರಿಂದ ಬೇಸತ್ತು ಈ ಹೆಜ್ಜೆ ಇಟ್ಟಿದ್ದಾರೆ ಎನ್ನಲಾಗಿದೆ. ಆದರೆ, ಇದು ಆತ್ಮಹತ್ಯೆಯಲ್ಲ, ಪತಿಯೇ ಕೊಲೆ ಮಾಡಿ ನೇಣು ಹಾಕಿದ್ದಾನೆ ಎಂದು ಕುಟುಂಬಸ್ಥರ ಅನುಮಾನ.

ಗೋಕಾಕ್ ಮೂಲದವರಾದ ರೇಖಾ ಮತ್ತು ಮಾಯಪ್ಪ ಅವರು ಪ್ರೀತಿಸಿ ವಿವಾಹವಾಗಿದ್ದರು. ರೇಖಾ ಕಾಲೇಜಿಗೆ ಹೋಗುತ್ತಿದ್ದಾಗ, ಅಲ್ಲಿಯೇ ಕ್ಲರ್ಕ್ ಆಗಿದ್ದ ಮಾಯಪ್ಪನೊಂದಿಗೆ ಪ್ರೀತಿ ಶುರುವಾಗಿತ್ತು. ಕುಟುಂಬಸ್ಥರನ್ನು ಒಪ್ಪಿಸಿ ಆರು ವರ್ಷಗಳ ಹಿಂದೆ ಮದುವೆಯಾಗಿದ್ದ ಈ ದಂಪತಿಗೆ ಒಂದು ಹೆಣ್ಣು ಮತ್ತು ಗಂಡು ಮಗು ಇದೆ. ಕಳೆದ ಕೆಲವು ದಿನಗಳಿಂದ ಮಾಯಪ್ಪ ಅವರು ಕುಡಿದು ಬಂದು ಪತ್ನಿ ರೇಖಾಗೆ ನಿರಂತರವಾಗಿ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡುತ್ತಿದ್ದರು. ಅಲ್ಲದೆ, ವರದಕ್ಷಿಣೆ ತರುವಂತೆ ಪೀಡಿಸುತ್ತಿದ್ದನೆಂದು ರೇಖಾ ಅವರ ಕುಟುಂಬಸ್ಥರು ಆರೋಪಿಸಿದ್ದಾರೆ.

ರೇಖಾ ಅವರು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಮೇಲ್ನೋಟಕ್ಕೆ ಇದು ಆತ್ಮಹತ್ಯೆ ಎಂದು ತೋರುತ್ತಿದೆ. ಆದರೆ, ರೇಖಾ ಕುಟುಂಬಸ್ಥರು ಇದು ಕೊಲೆ ಎಂದು ಬಲವಾಗಿ ಸಂದೇಹ ವ್ಯಕ್ತಪಡಿಸಿದ್ದಾರೆ. ದಂಪತಿಯ ನಾಲ್ಕು ವರ್ಷದ ಮಗು ಆಡಿರುವ ಮಾತುಗಳು ಈ ಅನುಮಾನವನ್ನು ಇನ್ನಷ್ಟು ಹೆಚ್ಚಿಸಿದೆ. “ಅಪ್ಪ, ಅಮ್ಮನಿಗೆ ಹೊಡೆಯುತ್ತಿದ್ದರು ಮತ್ತು ಸೀರೆ ಕುತ್ತಿಗೆಗೆ ಹಾಕಿ ಎಳೆದರು” ಎಂದು ಪುಟ್ಟ ಮಗು ಹೇಳಿರುವುದು, ಪತಿಯೇ ಕೊಲೆ ಮಾಡಿ ನೇಣು ಹಾಕಿ ಆತ್ಮಹತ್ಯೆಯಂತೆ ಬಿಂಬಿಸಿರುವ ಸಾಧ್ಯತೆ ಇದೆ ಎಂದು ಕುಟುಂಬಸ್ಥರಿಗೆ ಅನುಮಾನ.

ಘಟನೆ ಸಂಬಂಧ ಗೋವಿಂದರಾಜನಗರ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ. ಪೊಲೀಸರು ಆರೋಪಿ ಪತಿ ಮಾಯಪ್ಪನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ರೇಖಾ ಅವರ ಸಾವಿನಿಂದಾಗಿ ಎರಡು ಪುಟ್ಟ ಮಕ್ಕಳು ತಾಯಿ ಇಲ್ಲದೆ ತಬ್ಬಲಿಗಳಾಗಿದ್ದಾರೆ. ಗೋಕಾಕ್‌ನಿಂದ ಬೆಂಗಳೂರಿಗೆ ಬಂದಿರುವ ರೇಖಾ ಕುಟುಂಬಸ್ಥರು, ಮರಣೋತ್ತರ ಪರೀಕ್ಷೆಗಾಗಿ ಕಳೆದ ಎರಡು ದಿನಗಳಿಂದ ಪರದಾಡುತ್ತಿದ್ದಾರೆ. ತಹಶೀಲ್ದಾರ್ ಬಂದು ಪರಿಶೀಲನೆ ನಡೆಸಿದ ನಂತರವಷ್ಟೇ ಮರಣೋತ್ತರ ಪರೀಕ್ಷೆ ನಡೆಯಲಿದ್ದು, ವಿಕ್ಟೋರಿಯಾ ಆಸ್ಪತ್ರೆ ಶವಾಗಾರದ ಬಳಿಯೇ ರಾತ್ರಿ ಕಳೆದು ಕಾಯುತ್ತಿದ್ದಾರೆ.

ಇದನ್ನೂ ಓದಿ : ಜಾತಿ, ಧರ್ಮದ ಹಿನ್ನೆಲೆಯ ಕಥನ ” ಧರ್ಮಂ‌” ಚಿತ್ರದ ಟ್ರೈಲರ್ ಬಿಡುಗಡೆ!

Btv Kannada
Author: Btv Kannada

Read More