ಸಿಎಂ ಕುರ್ಚಿ ಫೈಟ್‌ಗೆ ನಾಳೆಯೇ ‘ಕ್ಲೈಮ್ಯಾಕ್ಸ್’ – ರಾಹುಲ್ ಗಾಂಧಿ ಜೊತೆ ಖರ್ಗೆ ಮಾತುಕತೆ!

ಬೆಂಗಳೂರು : ಕರ್ನಾಟಕ ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಕುರ್ಚಿ ವಿಚಾರವಾಗಿ ನಡೆಯುತ್ತಿರುವ ಮುಸುಕಿನ ಗುದ್ದಾಟವು ಇದೀಗ ಮಹತ್ವದ ಘಟ್ಟ ತಲುಪಿದೆ. ರಾಜ್ಯ ರಾಜಕೀಯದಲ್ಲಿ ಭಾರೀ ಕುತೂಹಲ ಮೂಡಿಸಿರುವ ‘ಪವರ್ ಶೇರಿಂಗ್’ ಕದನಕ್ಕೆ ಕಾಂಗ್ರೆಸ್ ಹೈಕಮಾಂಡ್ ನಾಳೆಯೇ ಅಂತ್ಯ ಹಾಡುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಇಂದು ಮತ್ತು ನಾಳೆ ದೆಹಲಿಯಲ್ಲಿ ಹೈವೋಲ್ಟೇಜ್ ರಾಜಕೀಯ ಚಟುವಟಿಕೆಗಳು ನಡೆಯಲಿವೆ.

ವಿದೇಶ ಪ್ರವಾಸದಲ್ಲಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಇಂದು ರಾತ್ರಿ ಭಾರತಕ್ಕೆ ಮರಳಲಿದ್ದಾರೆ. ರಾಜ್ಯ ಕಾಂಗ್ರೆಸ್‌ನ ಬೆಳವಣಿಗೆಗಳ ಬಗ್ಗೆ ಅವರು ಗಮನ ಹರಿಸಲಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸಹ ಇಂದು ರಾತ್ರಿಯೇ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ. ನಾಳೆ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಅವರ ನಡುವೆ ಮಹತ್ವದ ಸಭೆ ನಡೆಯುವ ಸಾಧ್ಯತೆ ಇದೆ. ಈ ಸಭೆಯಲ್ಲಿ ರಾಜ್ಯ ಕಾಂಗ್ರೆಸ್‌ನ ಸಿಎಂ ಗೊಂದಲ, ಸಂಪುಟ ಪುನಾರಚನೆ, ಮತ್ತು ಅಧಿಕಾರ ಹಂಚಿಕೆ ಸೂತ್ರದ ಕುರಿತು ಅಂತಿಮ ಚರ್ಚೆ ನಡೆಯುವ ನಿರೀಕ್ಷೆ ಇದೆ.

ಹೈಕಮಾಂಡ್ ನಾಯಕರು ನಾಳೆ ನಡೆಸುವ ಚರ್ಚೆಯ ಬಳಿಕ, ಕರ್ನಾಟಕದ ಹಾಲಿ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ಇಬ್ಬರನ್ನೂ ದೆಹಲಿಗೆ ಕರೆಸಿಕೊಂಡು ನೇರವಾಗಿ ಮಾತನಾಡುವ ಸಾಧ್ಯತೆ ಇದೆ. ಎರಡೂವರೆ ವರ್ಷಗಳ ಬಳಿಕ ಸಿಎಂ ಸ್ಥಾನ ಬದಲಾವಣೆ ಕುರಿತು ಕೇಳಿಬರುತ್ತಿರುವ ವದಂತಿಗಳ ಹಿನ್ನೆಲೆಯಲ್ಲಿ, ಸದ್ಯ ಕಾಂಗ್ರೆಸ್‌ನಲ್ಲಿ ನಡೆಯುತ್ತಿರುವ ‘ಪವರ್ ಶೇರಿಂಗ್ ಫೈಟ್’ ನಾಳೆಯೇ ನಿರ್ಣಾಯಕ ಕ್ಲೈಮ್ಯಾಕ್ಸ್ ಹಂತ ತಲುಪುವ ಸಾಧ್ಯತೆ ಇದೆ. ಸಿಎಂ ಕುರ್ಚಿ ವಿಚಾರದಲ್ಲಿ ಹೈಕಮಾಂಡ್ ಯಾವ ನಿರ್ಧಾರ ತೆಗೆದುಕೊಳ್ಳಲಿದೆ ಎಂಬುದು ರಾಜ್ಯ ರಾಜಕೀಯದಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

ಇದನ್ನೂ ಓದಿ : ಉತ್ತರ ಕರ್ನಾಟಕದಲ್ಲೂ ‘ಮಾರುತ’ನ ಆರ್ಭಟ – ರಾಜ್ಯಾದ್ಯಂತ ಶೇಯಸ್ ಮಂಜು, ದುನಿಯಾ ವಿಜಯ್ ಸಿನಿಮಾ ಹೌಸ್ ಫುಲ್ ಪ್ರದರ್ಶನ!

Btv Kannada
Author: Btv Kannada

Read More