ಕಾಂಗ್ರೆಸ್ ಹೈಕಮಾಂಡ್ ತೀರ್ಮಾನಕ್ಕೆ ನಾವೆಲ್ಲಾ ಬದ್ಧ – ಸಿಎಂ ಕುರ್ಚಿ ಫೈಟ್ ವಿಚಾರಕ್ಕೆ ಮತ್ತೆ ಸಿದ್ದರಾಮಯ್ಯ ಸ್ಪಷ್ಟನೆ !

ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಿಎಂ ಕುರ್ಚಿ ಫೈಟ್ ಮತ್ತು ಸಚಿವ ಸಂಪುಟ ಪುನಾರಚನೆ ಕುರಿತು ಮಹತ್ವದ ಹೇಳಿಕೆಗಳನ್ನು ನೀಡಿದ್ದಾರೆ. ಈ ಮೂಲಕ ರಾಜ್ಯ ಕಾಂಗ್ರೆಸ್‌ನಲ್ಲಿ ಮುಂದುವರಿದಿರುವ ನಾಯಕತ್ವ ಬಿಕ್ಕಟ್ಟಿನ ಕುರಿತು ಮತ್ತೊಮ್ಮೆ ಸ್ಪಷ್ಟನೆ ನೀಡಿದ್ದಾರೆ.

ಮುಖ್ಯಮಂತ್ರಿ ಸ್ಥಾನದ ವಿಚಾರವಾಗಿ ಕೇಳಿಬರುತ್ತಿರುವ ಚರ್ಚೆಗಳಿಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, “ಕಾಂಗ್ರೆಸ್ ಹೈಕಮಾಂಡ್‌ನ ತೀರ್ಮಾನಕ್ಕೆ ನಾವೆಲ್ಲರೂ ಬದ್ಧ” ಎಂದು ದೃಢವಾಗಿ ಹೇಳಿದ್ದಾರೆ. ಹೈಕಮಾಂಡ್ ನಾಯಕರು ಹೇಳಿದಂತೆ ನಾವು ಕೇಳುತ್ತೇವೆ. ಹೈಕಮಾಂಡ್‌ನ ತೀರ್ಮಾನವನ್ನು ನಾನೂ ಒಪ್ಪಬೇಕು, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೂ ಕೇಳಬೇಕು. ಹೈಕಮಾಂಡ್ ನಾನೇ ಮುಂದುವರೆಯಬೇಕು ಎಂದರೆ, ನಾನು ಮುಂದುವರೆಯುತ್ತೇನೆ. ಎಲ್ಲವನ್ನೂ ಹೈಕಮಾಂಡ್ ನಿರ್ಧಾರ ಮಾಡುತ್ತದೆ, ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಸಿಎಂ ಕುರ್ಚಿ ಬದಲಾವಣೆ ಕುರಿತು ಅಂತಿಮ ನಿರ್ಧಾರ ತೆಗೆದುಕೊಳ್ಳುವ ಅಧಿಕಾರವನ್ನು ಅವರು ಮತ್ತೊಮ್ಮೆ ಹೈಕಮಾಂಡ್‌ಗೆ ಬಿಟ್ಟಿದ್ದಾರೆ.

ಸಿಎಂ ಕುರ್ಚಿ ಬದಲಾವಣೆ ಕುರಿತು ತಾವು ಹೈಕಮಾಂಡ್‌ಗೆ ಯಾವುದೇ ಮನವಿ ಮಾಡಿಲ್ಲ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು. ಹೈಕಮಾಂಡ್‌ಗೆ ಸಚಿವ ಸಂಪುಟದ ಪುನಾರಚನೆ ಬಗ್ಗೆ ಮಾತ್ರ ಹೇಳಿದ್ದೇನೆ. ಎರಡೂವರೆ ವರ್ಷ ಬಳಿಕ ಸಂಪುಟ ಪುನಾರಚನೆ ಮಾಡುವ ಬಗ್ಗೆ ಪ್ರಸ್ತಾಪ ಮಾಡಿದ್ದೆ, ಎಂದು ಸಿಎಂ ಮಾಹಿತಿ ನೀಡಿದರು. ಡಿ.ಕೆ. ಶಿವಕುಮಾರ್ ಅವರ ಸಿಎಂ ಭವಿಷ್ಯದ ಕುರಿತು ಮಾತನಾಡಿದ ಸಿದ್ದರಾಮಯ್ಯ, ಹೈಕಮಾಂಡ್ ನಾಯಕರ ತೀರ್ಮಾನದ ಮೇಲೆ ಡಿಕೆಶಿ ಸಿಎಂ ಭವಿಷ್ಯ ನಿರ್ಧಾರವಾಗಲಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ : ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಆರೋಗ್ಯ ಸ್ಥಿತಿ ಗಂಭೀರ – ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ!

Btv Kannada
Author: Btv Kannada

Read More