ಕಲಬುರಗಿ : ಪಿಎಸ್ಐ (PSI) ನೇಮಕಾತಿ ಅಕ್ರಮದ ಪ್ರಮುಖ ಆರೋಪಿ ಆರ್.ಡಿ. ಪಾಟೀಲ್ ಅವರು ಜೈಲಿನಿಂದ ಬಿಡುಗಡೆಯಾದ ದಿನವೇ ಹೊಸ ವಿವಾದಕ್ಕೆ ಸಿಲುಕಿದ್ದಾರೆ. ಸುಪ್ರೀಂಕೋರ್ಟ್‌ನಿಂದ ಮಧ್ಯಂತರ ಜಾಮೀನು ಪಡೆದು ಹೊರಬಂದ ಪಾಟೀಲ್, ಕಲಬುರಗಿಯ ಕೇಂದ್ರ ಕಾರಾಗೃಹದ ಆವರಣದಲ್ಲಿ ಜೈಲು ಸಿಬ್ಬಂದಿಯೊಂದಿಗೆ ವಾಗ್ವಾದ ಮತ್ತು ಹಲ್ಲೆ ನಡೆಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಆರ್.ಡಿ. ಪಾಟೀಲ್ ಅವರಿಗೆ ಸುಪ್ರೀಂ ಕೋರ್ಟ್ ನವೆಂಬರ್ 21ರಂದು ಮೂರು ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿತ್ತು. ಈ ಹಿನ್ನೆಲೆಯಲ್ಲಿ ಪಾಟೀಲ್ ಅವರು ಅಂದೇ ಕಲಬುರಗಿಯ ಕೇಂದ್ರ ಕಾರಾಗೃಹದಿಂದ ಬಿಡುಗಡೆಯಾಗಿದ್ದರು. ಬಿಡುಗಡೆಯ ಸಂದರ್ಭದಲ್ಲಿ ಜೈಲು ವಾರ್ಡನ್ ಶಿವಕುಮಾರ್ ಅವರ ಕರ್ತವ್ಯಕ್ಕೆ ಅಡ್ಡಿಪಡಿಸಿ, ಪಾಟೀಲ್ ಅವರು ಅವರ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ಜೈಲು ವಾರ್ಡನ್ ಶಿವಕುಮಾರ್ ಅವರು ಫರಹತಬಾದ್ ಪೊಲೀಸ್ ಠಾಣೆಯಲ್ಲಿ ಪ್ರಥಮ ದೂರು ದಾಖಲಿಸಿದ್ದಾರೆ. ಇದಕ್ಕೆ ಪ್ರತಿಯಾಗಿ, ಜೈಲು ವಾರ್ಡನ್ ಶಿವಕುಮಾರ್ ಅವರೇ ತಮ್ಮ ಬಿಡುಗಡೆಗೆ ಅನಗತ್ಯವಾಗಿ ಅಡ್ಡಿಪಡಿಸಿ, ತಮ್ಮ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ಆರ್.ಡಿ. ಪಾಟೀಲ್ ಅವರು ಸಹ ಪ್ರತಿದೂರು ನೀಡಿದ್ದಾರೆ.

ಒಟ್ಟಾರೆಯಾಗಿ, ಜೈಲಿನಿಂದ ಹೊರಬಂದ ಕ್ಷಣಗಳಲ್ಲೇ ಆರೋಪಿ ಮತ್ತು ಜೈಲು ಸಿಬ್ಬಂದಿ ಪರಸ್ಪರ ಹಲ್ಲೆ ಮಾಡಿರುವ ಆರೋಪದಡಿ ಫರಹತಬಾದ್ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಎಫ್‌ಐಆರ್‌ಗಳು ದಾಖಲಾಗಿವೆ. ಪೊಲೀಸರು ಎರಡೂ ದೂರುಗಳ ಆಧಾರದ ಮೇಲೆ ತನಿಖೆಯನ್ನು ಆರಂಭಿಸಿದ್ದು, ಘಟನೆಯ ಸತ್ಯಾಸತ್ಯತೆಯನ್ನು ಪರಿಶೀಲಿಸುತ್ತಿದ್ದಾರೆ.

ಇದನ್ನೂ ಓದಿ : ಮದುವೆ ಮಂಟಪದಲ್ಲೇ ಸ್ಮೃತಿ ಮಂಧಾನ ತಂದೆಗೆ ಹೃದಯಾಘಾತ, ವಿವಾಹ ಮುಂದೂಡಿಕೆ!







