ಸಾಂಗ್ಲಿ: ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ ಸ್ಮೃತಿ ಮಂಧಾನ ಅವರ ಮನೆಯಲ್ಲಿ ಮದುವೆಯ ಸಂಭ್ರಮದ ವಾತಾವರಣ ಏಕಾಏಕಿ ಆತಂಕಕ್ಕೆ ತಿರುಗಿದೆ. ಗಾಯಕ ಮತ್ತು ಸಂಗೀತ ಸಂಯೋಜಕ ಪಲಾಶ್ ಮುಚ್ಚಲ್ ಅವರೊಂದಿಗೆ ಸಾಂಗ್ಲಿಯಲ್ಲಿ ನಡೆಯಬೇಕಿದ್ದ ಸ್ಮೃತಿ ಮಂಧಾನ ಅವರ ವಿವಾಹ ಸಮಾರಂಭದ ಮಧ್ಯೆಯೇ, ಅವರ ತಂದೆ ಶ್ರೀನಿವಾಸ್ ಮಂಧಾನ ಅವರು ತೀವ್ರ ಅನಾರೋಗ್ಯಕ್ಕೀಡಾಗಿದ್ದಾರೆ.

ಮದುವೆ ಸಮಾರಂಭ ನಡೆಯುತ್ತಿದ್ದ ಮಂಟಪಕ್ಕೆ ಆಂಬ್ಯುಲೆನ್ಸ್ ಪ್ರವೇಶಿಸಿದಾಗ ಅತಿಥಿಗಳಲ್ಲಿ ತೀವ್ರ ಆತಂಕ ಸೃಷ್ಟಿಯಾಗಿತ್ತು. ಶ್ರೀನಿವಾಸ್ ಮಂಧಾನ ಅವರ ಆರೋಗ್ಯ ಸ್ಥಿತಿ ಹದಗೆಟ್ಟಿದ್ದು, ಅವರಿಗೆ ಹೃದಯಾಘಾತವಾಗಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ. ತಕ್ಷಣ ಅವರನ್ನು ಸಾಂಗ್ಲಿಯ ಸರ್ವಿತ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಸ್ಮೃತಿ ಮಂಧಾನ ಅವರ ಮ್ಯಾನೇಜರ್ ತುಹೀನ್ ಮಿಶ್ರಾ ಅವರು ಈ ಕುರಿತು ಮಾಹಿತಿ ನೀಡಿದ್ದು, ಬೆಳಗಿನ ಉಪಾಹಾರದ ಸಮಯದಲ್ಲಿ ಶ್ರೀನಿವಾಸ್ ಮಂಧಾನ ಅವರ ಆರೋಗ್ಯದಲ್ಲಿ ಏರುಪೇರಾಗಿತ್ತು. ಮಧ್ಯಾಹ್ನದ ಹೊತ್ತಿಗೆ ಅವರ ಸ್ಥಿತಿ ಹದಗೆಟ್ಟ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಕರೆದೊಯ್ಯಬೇಕಾಯಿತು ಎಂದು ತಿಳಿಸಿದ್ದಾರೆ.
ಈ ಅನಿರೀಕ್ಷಿತ ಘಟನೆಯಿಂದಾಗಿ ಸ್ಮೃತಿ ಮಂಧಾನ ಮತ್ತು ಪಲಾಶ್ ಮುಚ್ಚಲ್ ಅವರ ವಿವಾಹ ಸಮಾರಂಭವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ. ಕ್ರೀಡಾ ಮತ್ತು ಸಂಗೀತ ಲೋಕದ ಗಣ್ಯರು ಹಾಗೂ ಅಭಿಮಾನಿಗಳು ಶ್ರೀನಿವಾಸ್ ಮಂಧಾನ ಅವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸಿದ್ದಾರೆ.
ಇದನ್ನೂ ಓದಿ : ಒಕ್ಕಲಿಗರ ಸಂಘದ ಚುನಾವಣೆಯಲ್ಲಿ ಡಿಕೆಶಿ ಬಣಕ್ಕೆ ಭರ್ಜರಿ ಜಯ – ನೂತನ ಅಧ್ಯಕ್ಷರಾಗಿ ಎಲ್. ಶ್ರೀನಿವಾಸ್ ಆಯ್ಕೆ!







