ಹೊಸಪೇಟೆಯಲ್ಲಿ ನಿಯಮ ಮೀರಿದ ರಸ್ತೆ ಡಾಂಬರೀಕರಣ – ‘ಗುಣಮಟ್ಟದಲ್ಲಿ ರಾಜಿ ಇಲ್ಲ’ ಎಂದ ಶಾಸಕ ಗವಿಯಪ್ಪ!

ವಿಜಯನಗರ :  ವಿಜಯನಗರ ಜಿಲ್ಲೆಯ ಪ್ರಮುಖ ನಗರವಾದ ಹೊಸಪೇಟೆಯಲ್ಲಿ ರಸ್ತೆಗಳ ಡಾಂಬರೀಕರಣ ಕಾಮಗಾರಿಯು ಭಾರೀ ವಿವಾದಕ್ಕೆ ಕಾರಣವಾಗಿದೆ. ರಸ್ತೆಯ ಮೇಲೆ ರಸ್ತೆ ಹಾಕುವ ಚಾಳಿ ಹೊಸಪೇಟೆಯ ಹೃದಯಭಾಗದಲ್ಲಿ ಮುಂದುವರಿದಿದ್ದು, ಈ ನಿರ್ಮಾಣ ಕಾರ್ಯದಲ್ಲಿ ಪಾಲಿಸಬೇಕಾದ ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸುತ್ತಿಲ್ಲ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ರಸ್ತೆ ನಿರ್ಮಾಣಕ್ಕೆ ನಿಗದಿಪಡಿಸಿದ 40 MM ದಪ್ಪದ ಡಾಂಬರು ಹಾಕುವ ಬದಲು ಕೇವಲ 20 MM ನಷ್ಟು ಕಡಿಮೆ ಗುಣಮಟ್ಟದ ಡಾಂಬರು ಬಳಸಲಾಗುತ್ತಿದೆ. ಇದರಿಂದಾಗಿ ಕೋಟಿಗಟ್ಟಲೆ ಹಣ ಖರ್ಚು ಮಾಡಿ ಮಾಡುತ್ತಿರುವ ಈ ರಸ್ತೆಗಳು ಸಾರ್ವಜನಿಕರ ತೆರಿಗೆ ಹಣವನ್ನು ಪೋಲು ಮಾಡುತ್ತಿವೆ ಎಂಬ ಸಂಶಯ ವ್ಯಕ್ತವಾಗಿದೆ. ಹಿಂದೆ ಮಾಜಿ ಸಚಿವ ಆನಂದ್ ಸಿಂಗ್ ಅವರ ಅವಧಿಯಲ್ಲಿ ನಿರ್ಮಿಸಲಾದ ಡಾಂಬರ್ ರಸ್ತೆಗಳು ಇನ್ನೂ ಗಟ್ಟಿಯಾಗಿರುವಾಗಲೇ, ಆ ರಸ್ತೆಗಳ ಮೇಲೆ ಮತ್ತೊಮ್ಮೆ ಹೊಸ ರಸ್ತೆಯನ್ನು ಹಾಕಲಾಗುತ್ತಿದೆ. ಆದರೆ, ಈ ಹೊಸ ಕಾಮಗಾರಿಯಲ್ಲಿ ಯಾವುದೇ ನಿಯಮಗಳು ಪಾಲನೆಯಾಗುತ್ತಿಲ್ಲ ಎಂಬುದು ಸ್ಥಳೀಯರ ದೂರು.

ಈ ಎಲ್ಲ ಆರೋಪಗಳ ಹಿನ್ನೆಲೆಯಲ್ಲಿ, ಸ್ಥಳೀಯ ಕಾಂಗ್ರೆಸ್ ಶಾಸಕ ಎಚ್.ಆರ್. ಗವಿಯಪ್ಪ ಅವರು ಸ್ವತಃ ರಸ್ತೆ ಕಾಮಗಾರಿ ನಡೆಯುತ್ತಿರುವ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ರಸ್ತೆಗಳ ನಿರ್ಮಾಣದ ವಿಚಾರದಲ್ಲಿ ಗುಣಮಟ್ಟದ ಕುರಿತು ಯಾವುದೇ ರಾಜಿಗೆ ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದ ಶಾಸಕರು, ಕಾಮಗಾರಿ ನಡೆಸುತ್ತಿರುವ ಇಲಾಖೆಗೆ ಮತ್ತು ಗುತ್ತಿಗೆದಾರರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಕೋಟಿಗಟ್ಟಲೆ ಹಣವನ್ನು ಖರ್ಚು ಮಾಡಿ ನಡೆಸುತ್ತಿರುವ ಈ ಡಾಂಬರೀಕರಣ ಕಾಮಗಾರಿಯು ಉತ್ತಮ ಗುಣಮಟ್ಟದ ರಸ್ತೆಗಳನ್ನು ನಿರ್ಮಿಸುವ ಮೂಲಕ ಸಾರ್ವಜನಿಕರಿಗೆ ಅನುಕೂಲವಾಗಬೇಕು ಎಂದು ಶಾಸಕ ಗವಿಯಪ್ಪ ಅವರು ನಿರ್ದೇಶನ ನೀಡಿದ್ದಾರೆ.

ಇದನ್ನೂ ಓದಿ : ಫೈನ್‌ನಿಂದ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ ಆಟೋ ಚಾಲಕ!

Btv Kannada
Author: Btv Kannada

Read More