ಎಪಿಎಂಸಿ ಅಧ್ಯಕ್ಷ ಸೇರಿ ನಾಲ್ವರ ವಿರುದ್ಧ FIR ದಾಖಲು – ಅಕ್ರಮ ಹಣ ವಸೂಲಿ ಆರೋಪ!

ರಾಯಚೂರು : ಕೃಷಿ ಉತ್ಪನ್ನ ಸಾಗಣೆ ವಾಹನಗಳಿಂದ ಅಕ್ರಮವಾಗಿ ಹಣ ವಸೂಲಿ ಆರೋಪದ ಮೇಲೆ, ರಾಯಚೂರು ಜಿಲ್ಲೆಯ ದೇವದುರ್ಗ ಎಪಿಎಂಸಿ ಅಧ್ಯಕ್ಷ ಆದನಗೌಡ, ಪ್ರಭಾರಿ ಕಾರ್ಯದರ್ಶಿ ನೀಲಪ್ಪಶೆಟ್ಟಿ ಹಾಗೂ ಸಿಬ್ಬಂದಿಗಳಾದ ಚಂದ್ರು ಮತ್ತು ರಮೇಶ್ ಸೇರಿ ನಾಲ್ವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಈ ಅಕ್ರಮ ಶುಲ್ಕ ವಸೂಲಿ ದೇವದುರ್ಗ ತಾಲೂಕಿನ ತಿಂಥಣಿ ಬ್ರಿಡ್ಜ್ ಬಳಿ ನಡೆದಿದೆ.

ಎಪಿಎಂಸಿ ಅಧ್ಯಕ್ಷ ಆದನಗೌಡ ಅವರು ಅನಧಿಕೃತವಾಗಿ ಸಿಬ್ಬಂದಿಗಳನ್ನು ನೇಮಿಸಿಕೊಂಡು, ಕೃಷಿ ಉತ್ಪನ್ನಗಳನ್ನು ಸಾಗಿಸುವ ಲಾರಿಗಳಿಂದ ನಿಯಮಬಾಹಿರವಾಗಿ ಶುಲ್ಕ ವಸೂಲಿ ಮಾಡುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ. ಆರೋಪಿಗಳು ಕಳೆದ ಒಂದು ವಾರದಿಂದ ತಿಂಥಣಿ ಬ್ರಿಡ್ಜ್ ಬಳಿ ಅಕ್ರಮ ಶೆಡ್ಡೊಂದನ್ನು ನಿರ್ಮಿಸಿ, ಈ ಅಕ್ರಮ ಕೃತ್ಯಕ್ಕೆ ಇಳಿದಿದ್ದರು. ಪ್ರತಿ ಲಾರಿಗೆ 100 ರೂ. ಗಳಂತೆ ಹಣ ವಸೂಲಿ ಮಾಡಿ, ಎಪಿಎಂಸಿ ಅಧ್ಯಕ್ಷರು ಸೇರಿದಂತೆ ನಾಲ್ವರು ಅಕ್ರಮ ಎಸಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಈ ನಿಯಮಬಾಹಿರ ಶುಲ್ಕ ವಸೂಲಿ ಬಗ್ಗೆ ಗಮನಿಸಿದ ದೇವದುರ್ಗ ಎಪಿಎಂಸಿ ಉಪಾಧ್ಯಕ್ಷ ಅಬ್ದುಲ್ ಅಜೀಜ್ ಅವರು, ಕೂಡಲೇ ಈ ಬಗ್ಗೆ ದೂರು ದಾಖಲಿಸಿದ್ದಾರೆ. ಈ ದೂರಿನನ್ವಯ ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : ಫೈನ್‌ನಿಂದ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ ಆಟೋ ಚಾಲಕ!

Btv Kannada
Author: Btv Kannada

Read More