ಚಿತ್ರದುರ್ಗ : ಚಿತ್ರದುರ್ಗದ ಗಾಂಧಿ ವೃತ್ತದಲ್ಲಿ ಸಂಚಾರಿ ಪೊಲೀಸರು ದಂಡ ವಿಧಿಸಲು ಯತ್ನಿಸಿದಾಗ ಮನನೊಂದ ಆಟೋ ಚಾಲಕರೊಬ್ಬರು ಮೈಗೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ಗಾಂಧಿ ವೃತ್ತದ ಬಳಿ ಸಂಚಾರಿ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದಾಗ, 29 ವರ್ಷದ ಆಟೋ ಚಾಲಕ ತಿಪ್ಪೇಶ್ ಏಕಮುಖ ರಸ್ತೆಯಲ್ಲಿ (One-Way) ಬಂದಿದ್ದಾರೆ. ಇದನ್ನು ಗಮನಿಸಿದ ಪೊಲೀಸರು, ತಿಪ್ಪೇಶ್ ಅವರ ಆಟೋ ತಡೆದು ದಂಡ ವಿಧಿಸಲು ಮುಂದಾದರು.

ದಂಡ ವಿಧಿಸುವ ವಿಚಾರವಾಗಿ ಪೊಲೀಸರು ಮತ್ತು ಆಟೋ ಚಾಲಕ ತಿಪ್ಪೇಶ್ ನಡುವೆ ತೀವ್ರ ವಾಗ್ವಾದ ನಡೆಯಿತು. ಈ ಘಟನೆಯಿಂದ ತೀವ್ರವಾಗಿ ನೊಂದ ತಿಪ್ಪೇಶ್, ಸಾರ್ವಜನಿಕರ ಎದುರೇ ಬೆಂಕಿ ಹಚ್ಚಿಕೊಳ್ಳಲು ಯತ್ನಿಸಿದ್ದಾರೆ. ಬೆಂಕಿ ಹಚ್ಚಿಕೊಂಡ ತಿಪ್ಪೇಶ್ ಅವರ ದೇಹದ ಕೆಲ ಭಾಗಗಳು ಸುಟ್ಟು ಹೋಗಿದ್ದು, ತೀವ್ರ ಆತಂಕದ ನಡುವೆಯೂ, ಅವರು ಯಾರ ಸಹಾಯವನ್ನೂ ಪಡೆಯದೆ, ತಾವೇ ತಮ್ಮ ಆಟೋ ಚಲಾಯಿಸಿಕೊಂಡು ಜಿಲ್ಲಾ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದಿದ್ದಾರೆ.

ಈ ಘಟನೆಯಿಂದಾಗಿ ಗಾಂಧಿ ವೃತ್ತದಲ್ಲಿ ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು.
ಇದನ್ನೂ ಓದಿ : ಸಂಗೀತ ಲೋಕದತ್ತ ಮಂಚು ಮನೋಜ್..’ಮೋಹನ ರಾಗ ಸಂಗೀತ’ ಕಂಪನಿ ಆರಂಭ!







