ಕಾಲ್ ಸೆಂಟರ್ ನೌಕರರ ಕಿಡ್ನಾಪ್ – 12 ಗಂಟೆಯೊಳಗೆ 8 ಆರೋಪಿಗಳನ್ನು ಬಂಧಿಸಿದ ಕೋರಮಂಗಲ ಪೊಲೀಸರು!

ಬೆಂಗಳೂರು : ಕಾಲ್ ಸೆಂಟರ್‌ನ ನಾಲ್ವರು ಉದ್ಯೋಗಿಗಳನ್ನು ಕಿಡ್ನಾಪ್ ಮಾಡಿದ್ದ ಎಂಟು ಮಂದಿ ಖತರ್ನಾಕ್ ಆರೋಪಿಗಳನ್ನು ಕೋರಮಂಗಲ ಠಾಣೆಯ ಪೊಲೀಸರು ಕೇವಲ 12 ಗಂಟೆಗಳ ಅವಧಿಯಲ್ಲಿ ಅವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ . ಈ ಬಂಧಿತರಲ್ಲಿ ಕೋಲಾರ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಒಬ್ಬ ಪೊಲೀಸ್ ಕಾನ್‌ಸ್ಟೇಬಲ್ ಕೂಡ ಸೇರಿರುವುದು ಬೆಳಕಿಗೆ ಬಂದಿದೆ.

ಕೋರಮಂಗಲದ ‘ಗ್ಲೋಬಲ್ ಕನೆಕ್ಟ ಟೆಲಿಕಾಂ ಪ್ರೈ. ಲಿ’ 4 ಮಂದಿ ಕಾಲ್ ಸೆಂಟರ್ ಉದ್ಯೋಗಿಗಳಾದ ಪವನ್, ರಾಜ್ ವೀರ್, ಆಕಾಶ್, ಮತ್ತು ಅನಸ್. ಕಾಲ್ ಸೆಂಟರ್ ಬಳಿ ಹೋಗಿದ್ದ ಆರೋಪಿಗಳು, ನಾಲ್ವರು ಉದ್ಯೋಗಿಗಳನ್ನು ಕರೆದು “ನಾವು ಪೊಲೀಸರು” ಎಂದು ಬೆದರಿಕೆ ಹಾಕಿದ್ದಾರೆ. ಬಳಿಕ ಅವರನ್ನು ತಮ್ಮ ಕಾರಿನಲ್ಲಿ ಬಲವಂತವಾಗಿ ಕೂರಿಸಿಕೊಂಡು ಅಪಹರಿಸಿದ್ದಾರೆ.

ಉದ್ಯೋಗಿಗಳನ್ನು ಕಿಡ್ನಾಪ್ ಮಾಡಿದ ಬಳಿಕ ಆರೋಪಿಗಳು 25 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಇದೇ ವೇಳೆ, ಆಪರೇಷನ್ ಮ್ಯಾನೇಜರ್ ಅವರ ಖಾತೆಯಿಂದ ಬರೋಬ್ಬರಿ 18 ಲಕ್ಷ ರೂಪಾಯಿಗಳನ್ನು ತಮ್ಮ ಖಾತೆಗೆ ವರ್ಗಾವಣೆ ಮಾಡಿಕೊಂಡಿದ್ದಾರೆ. ಮುಂಜಾನೆ 4 ಗಂಟೆಗೆ ಬಿಪಿಒ ಸಿಬ್ಬಂದಿಯಿಂದ ಪೊಲೀಸರಿಗೆ ಕಿಡ್ನಾಪ್ ಕುರಿತು ಮಾಹಿತಿ ಲಭಿಸಿತು. ತಕ್ಷಣ ಕಾರ್ಯಪ್ರವೃತ್ತರಾದ ಕೋರಮಂಗಲ ಪೊಲೀಸರು ನಾಲ್ಕು ವಿಶೇಷ ತಂಡಗಳನ್ನು ರಚಿಸಿಕೊಂಡು ಆರೋಪಿಗಳ ಬೇಟೆಗೆ ಇಳಿದರು.

ಬೆಳಗ್ಗೆ 11 ಗಂಟೆಯ ಸುಮಾರಿಗೆ ಆರೋಪಿಗಳು ಹೊಸಕೋಟೆಯ ಒಂದು ಲಾಡ್ಜ್‌ನಲ್ಲಿ ಅಪಹೃತರನ್ನು ಕೂಡಿ ಹಾಕಿರುವುದು ಪತ್ತೆಯಾಯಿತು. ಮಿಂಚಿನ ಕಾರ್ಯಾಚರಣೆ ನಡೆಸಿದ ಪೊಲೀಸರು ನಾಲ್ವರನ್ನು ಸುರಕ್ಷಿತವಾಗಿ ರಕ್ಷಿಸಿ, ಸ್ಥಳದಲ್ಲೇ ಎಂಟು ಆರೋಪಿಗಳನ್ನು ಹೆಡೆಮುರಿ ಕಟ್ಟಿ ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಛಲಪತಿ, ಭರತ್, ಪವನ್, ಪ್ರಸನ್ನ, ಅತೀಕ್, ಜಭಿವುಲ್ಲ ಸೇರಿದಂತೆ ಒಟ್ಟು ಎಂಟು ಮಂದಿ. ಇವರೆಲ್ಲರೂ 27 ರಿಂದ 30 ವರ್ಷದೊಳಗಿನ ಯುವಕರು. ಬಂಧಿತರಲ್ಲಿ ಛಲಪತಿ ಎಂಬಾತ ಕೋಲಾರ ಜಿಲ್ಲೆಯಲ್ಲಿ ಪೊಲೀಸ್ ಕಾನ್‌ಸ್ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಎಂದು ತಿಳಿದುಬಂದಿದೆ.

ಪೊಲೀಸರು ಕೃತ್ಯಕ್ಕೆ ಬಳಸಿದ್ದ ಎರಡು ಕಾರುಗಳನ್ನು ಜಪ್ತಿ ಮಾಡಿದ್ದಾರೆ. ಇತ್ತೀಚೆಗೆ ನಡೆದಿದ್ದ ಕಾಲ್ ಸೆಂಟರ್ ರೇಡ್ ಕೇಸ್‌ಗಳನ್ನೇ ಬಂಡವಾಳ ಮಾಡಿಕೊಂಡು ಈ ಗ್ಯಾಂಗ್ ಸುಲಿಗೆಗೆ ಇಳಿದಿದೆ ಎಂದು ಶಂಕಿಸಲಾಗಿದೆ. ಸದ್ಯ ಬಂಧಿತರನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ.

ಇದನ್ನೂ ಓದಿ : ಮೆಕ್ಕೆಜೋಳ ಖರೀದಿ-ಆಮದು ಬಗ್ಗೆ ಸಿಎಂ ಹಸಿ ಹಸಿ ಸುಳ್ಳು ಹೇಳುತ್ತಿದ್ದಾರೆ – ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಿಡಿ!

Btv Kannada
Author: Btv Kannada

Read More