ಬೆಂಗಳೂರು : ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭವಿಸಿದ ದುರಂತ ಕಾಲ್ತುಳಿತ ಪ್ರಕರಣದಲ್ಲಿ 11 ಜನರ ಸಾವಿಗೆ ನೇರವಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB), ಡಿಎನ್‌ಎ (DNA) ಮತ್ತು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (KSCA) ಸಂಸ್ಥೆಗಳೇ ಹೊಣೆ ಎಂದು ಸಿಐಡಿ ತನಿಖೆಯಲ್ಲಿ ಬಯಲಾಗಿದೆ. ತನಿಖೆ ಪೂರ್ಣಗೊಳಿಸಿರುವ ಸಿಐಡಿ ಅಧಿಕಾರಿಗಳು, ಚಾರ್ಜ್ ಶೀಟ್ ಸಲ್ಲಿಸಲು ಹೈಕೋರ್ಟ್‌ನ ಅನುಮತಿಗಾಗಿ ಕಾಯುತ್ತಿದ್ದರು. ಇದೀಗ ಹೈಕೋರ್ಟ್‌ನಿಂದ ಗ್ರೀನ್ ಸಿಗ್ನಲ್ ಸಿಕ್ಕಿದ್ದು, 2,200ಕ್ಕೂ ಹೆಚ್ಚು ಪುಟಗಳ ಚಾರ್ಜ್ ಶೀಟ್ ಅನ್ನು ನ್ಯಾಯಾಲಯಕ್ಕೆ ಸಲ್ಲಿಸಲು ಸಿಐಡಿ ಸಿದ್ಧತೆ ನಡೆಸಿದೆ.

ಸಿಐಡಿ ತನಿಖಾ ವರದಿಯಲ್ಲಿ, ಕಾಲ್ತುಳಿತಕ್ಕೆ ಕಾರಣವಾದ ಪ್ರಮುಖ ಅಂಶಗಳು ಮತ್ತು ಮೂರು ಸಂಸ್ಥೆಗಳ ವೈಫಲ್ಯಗಳನ್ನು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಕಾರ್ಯಕ್ರಮ ಆಯೋಜನೆಗೂ ಮುನ್ನ ಸರಿಯಾದ ಪ್ಲ್ಯಾನ್ ಇರಲಿಲ್ಲ. ಸಭೆ ನಡೆಸಿ, ತೆಗೆದುಕೊಂಡ ನಿರ್ಧಾರಗಳ ಬಗ್ಗೆ ಪೊಲೀಸ್ ಅಧಿಕಾರಿಗಳಿಗೆ ಸರಿಯಾದ ಮಾಹಿತಿ ನೀಡಲಾಗಿಲ್ಲ. ಕಾರ್ಯಕ್ರಮ ಆಯೋಜನೆಗೂ ಮುನ್ನ ನಡೆಸಿದ ಸಭೆಯಲ್ಲಿ ಸರಿಯಾದ ಪ್ಲ್ಯಾನಿಂಗ್ ಇಲ್ಲದೆ ನಿರ್ಧಾರ ತೆಗೆದುಕೊಂಡಿದ್ದರು.

ಆರ್‌ಸಿಬಿ ಸಂಸ್ಥೆಯು ಟಿಕೆಟ್ ಬಗ್ಗೆ ಗೊಂದಲಮಯ ಮಾಹಿತಿ ನೀಡಿದ್ದು, ಇದು ಸುಳ್ಳು ವದಂತಿಗಳಿಗೆ ಕಾರಣವಾಯಿತು. ಈ ಗೊಂದಲದಿಂದಾಗಿ ಹೆಚ್ಚಿನ ಸಂಖ್ಯೆಯ ಜನ ಸೇರಿ ಘಟನೆ ಸಂಭವಿಸಿದೆ. ಡಿಎನ್‌ಎ (DNA) ಕಡೆಯಿಂದ ಯಾವುದೇ ಸಮರ್ಪಕ ಭದ್ರತಾ ಯೋಜನೆ ಇರಲಿಲ್ಲ. ಖಾಸಗಿ ಭದ್ರತಾ ಏಜೆನ್ಸಿಗಳ ಬಳಕೆಯಲ್ಲಿ ಸಂಪೂರ್ಣವಾಗಿ ವಿಫಲವಾಗಿರುವುದು ತನಿಖೆಯಲ್ಲಿ ದೃಢಪಟ್ಟಿದೆ. ಪೊಲೀಸ್ ಇಲಾಖೆಯೊಂದಿಗೆ ಸರಿಯಾದ ಮಾತುಕತೆ ಅಥವಾ ಸಮನ್ವಯ ನಡೆಸದೆ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಸಿಐಡಿ ಅಧಿಕಾರಿಗಳು ನೂರಾರು ಪ್ರತ್ಯಕ್ಷ ಸಾಕ್ಷಿಗಳ ಹೇಳಿಕೆ, ಸಿಸಿಟಿವಿ ದೃಶ್ಯಾವಳಿಗಳು, ಗಾಯಾಳುಗಳ ಹೇಳಿಕೆಗಳು ಹಾಗೂ ಘಟನೆಯಲ್ಲಿ ಭಾಗಿಯಾದವರ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದಾರೆ. ಎಲ್ಲಾ ಗೇಟ್‌ಗಳ ಬಳಿಯ ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲನೆ. ಪ್ರತೀ ಗೇಟ್‌ನಲ್ಲಿ ಕರ್ತವ್ಯ ನಿರ್ವಹಿಸಿದ್ದ ಭದ್ರತಾ ಸಿಬ್ಬಂದಿ ಹಾಗೂ ಪೊಲೀಸರ ಹೇಳಿಕೆ ದಾಖಲು. ಗಾಯಾಳುಗಳು ಮತ್ತು ಅವರನ್ನು ಆಸ್ಪತ್ರೆಗೆ ಸಾಗಿಸಿದವರ ಹೇಳಿಕೆ ದಾಖಲು.

ತನಿಖೆಯಲ್ಲಿ ಪತ್ತೆಯಾದ ಈ ಎಲ್ಲಾ ಅಂಶಗಳನ್ನು ಪರಿಗಣಿಸಿ, RCB, DNA ಮತ್ತು KSCA – ಈ ಮೂರು ಸಂಸ್ಥೆಗಳನ್ನು 11 ಜನರ ಸಾವಿಗೆ ನೇರ ಹೊಣೆ ಎಂದು ಸಿಐಡಿ ಚಾರ್ಜ್ ಶೀಟ್‌ನಲ್ಲಿ ಉಲ್ಲೇಖಿಸಿದೆ.
ಇದನ್ನೂ ಓದಿ : ಪೊಲೀಸ್ ಅಧಿಕಾರಿಗಳಿಂದ ಬಹುನಿರೀಕ್ಷಿತ “ಮಾರುತ” ಚಿತ್ರ ವೀಕ್ಷಣೆ!







