ಹಾವೇರಿ : ಜಿಲ್ಲಾ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ಸಿಬ್ಬಂದಿಯ ಘೋರ ನಿರ್ಲಕ್ಷ್ಯದಿಂದಾಗಿ ನವಜಾತ ಶಿಶುವೊಂದು ಸಾವನ್ನಪ್ಪಿರುವ ಘಟನೆ ನಡೆದಿದೆ. ಸಿಬ್ಬಂದಿಯ ಬೇಜವಾಬ್ದಾರಿಯೇ ಈ ದುರಂತಕ್ಕೆ ಕಾರಣ ಎಂದು ಮಗುವಿನ ಸಂಬಂಧಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಣೆಬೆನ್ನೂರು ತಾಲೂಕಿನ ಕಾಕೋಳ ಗ್ರಾಮದ ರೂಪಾ ಗಿರೀಶ್ ಕರಬಣ್ಣನವರ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆ 9 ಗಂಟೆಗೆ ಅವರನ್ನು ಹಾವೇರಿ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಗೆ ಕರೆತರಲಾಗಿತ್ತು. ಗರ್ಭಿಣಿ ನೋವಿನಿಂದ ಒದ್ದಾಡುತ್ತಿದ್ದರೂ, ಕರ್ತವ್ಯ ನಿರತ ಆಸ್ಪತ್ರೆ ಸಿಬ್ಬಂದಿ ರೂಪಾ ಅವರಿಗೆ ಒಂದು ತಾಸುಗಳ ಕಾಲ ಸೂಕ್ತ ಹಾಸಿಗೆಯನ್ನು ನೀಡದೆ ನೆಲದ ಮೇಲೆ ಕೂರಿಸಿದ್ದಾರೆ ಎಂದು ಗಂಭೀರ ಆರೋಪ ಮಾಡಲಾಗಿದೆ. ನೋವು ಹೆಚ್ಚಾದ ಕಾರಣ ರೂಪಾ ಅವರು ಶೌಚಾಲಯಕ್ಕೆ ಹೋಗಲು ಪ್ರಯತ್ನಿಸಿದ್ದಾರೆ. ಅವರು ಶೌಚಾಲಯಕ್ಕೆ ಹೋಗುವ ಮಾರ್ಗದಲ್ಲೇ ಹೆರಿಗೆಯಾಗಿದೆ. ಈ ಆಕಸ್ಮಿಕ ಹೆರಿಗೆಯಿಂದಾಗಿ ನವಜಾತ ಶಿಶು ನೆಲಕ್ಕೆ ಬಿದ್ದಿದ್ದು, ತೀವ್ರ ಪೆಟ್ಟು ತಗುಲಿ ಸ್ಥಳದಲ್ಲೇ ಸಾವನ್ನಪ್ಪಿದೆ.

ಆಸ್ಪತ್ರೆಯ ವೈದ್ಯರು ಮತ್ತು ನರ್ಸ್‌ಗಳು ಕರ್ತವ್ಯಕ್ಕೆ ಹಾಜರಿದ್ದರೂ, ಗರ್ಭಿಣಿಗೆ ತುರ್ತು ಚಿಕಿತ್ಸೆ ನೀಡುವ ಬದಲಿಗೆ ಮೊಬೈಲ್‌ನಲ್ಲಿ ಮಾತನಾಡುತ್ತಾ ನಿರ್ಲಕ್ಷ್ಯ ವಹಿಸಿದ್ದರಿಂದ ಈ ದುರಂತ ಸಂಭವಿಸಿದೆ ಎಂದು ಸಂಬಂಧಿಕರು ಆರೋಪಿಸಿದ್ದಾರೆ. ಅವರ ನಿರ್ಲಕ್ಷ್ಯವೇ ಮಗುವಿನ ಸಾವಿಗೆ ಕಾರಣ ಎಂದು ಮಗುವಿನ ಪೋಷಕರು ಮತ್ತು ಸಂಬಂಧಿಕರು ಆಕ್ರೋಶದಿಂದ ಹೇಳಿಕೆ ನೀಡಿದ್ದಾರೆ.
ಈ ಘಟನೆಗೆ ಕಾರಣರಾದ ವೈದ್ಯರು ಮತ್ತು ನರ್ಸ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪೋಷಕರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ : ಕಾರವಾರದಲ್ಲಿ ಗ್ಯಾಸ್ ಟ್ಯಾಂಕರ್ ಪಲ್ಟಿ – ಚಾಲಕ ಗಂಭೀರ!







