ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ನ ಸ್ಪರ್ಧಿ, ಹಾಸ್ಯ ನಟ ಗಿಲ್ಲಿ ಅವರ ವಿರುದ್ಧ ರಾಜ್ಯ ಮಹಿಳಾ ಆಯೋಗಕ್ಕೆ ದೂರು ದಾಖಲಾಗಿದೆ. ಬಿಗ್ ಬಾಸ್ ಮನೆಯಲ್ಲಿ ಗಿಲ್ಲಿ ಅವರು ಹೆಣ್ಣು ಮಕ್ಕಳ ಉಡುಪನ್ನು ಮುಟ್ಟುವ ಅಧಿಕಾರ ನೀಡಿದ್ಯಾರು ಎಂದು ಆರೋಪಿಸಿ ಕಲಾವಿದೆ ಕುಶಲ ಎಂಬುವವರು ದೂರು ಸಲ್ಲಿಸಿದ್ದಾರೆ.

ಕಲಾವಿದೆ ಕುಶಲ, ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಗಿಲ್ಲಿ ನಟ ಅವರು ಸ್ಪರ್ಧಿ ರಿಷಾ ಎಂಬುವವರ ಉಡುಪನ್ನು ಬಾತ್‌ರೂಮ್‌ನಿಂದ ಹೊರತಂದು ಬಿಸಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಹೆಣ್ಣುಮಕ್ಕಳ ಉಡುಪನ್ನು ಮುಟ್ಟುವ ಅಧಿಕಾರವನ್ನು ಯಾರು ನೀಡಿದ್ದಾರೆ? ಮತ್ತು ಇಂತಹ ಘಟನೆಗಳಿಂದ ಸಮಾಜಕ್ಕೆ ಯಾವ ಸಂದೇಶ ಪ್ರಸಾರ ಮಾಡಲು ಹೊರಟಿದೆ? ಎಂದು ದೂರುದಾರರು ಪ್ರಶ್ನಿಸಿದ್ದಾರೆ. ಕಾರ್ಯಕ್ರಮದಲ್ಲಿನ ಈ ಘಟನೆಯು ಮಹಿಳೆಯರಿಗೆ ಅಗೌರವ ತಂದಿದೆ ಎಂದು ಅಭಿಪ್ರಾಯಪಟ್ಟಿರುವ ಅರ್ಜಿದಾರರು, ಕಲರ್ಸ್ ಚಾನೆಲ್‌ನಲ್ಲಿ ಪ್ರಸಾರವಾಗುತ್ತಿರುವ ಈ ಶೋವನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಆಯೋಗವನ್ನು ಆಗ್ರಹಿಸಿದ್ದಾರೆ.

ದೂರಿನ ಗಂಭೀರತೆಯನ್ನು ಪರಿಗಣಿಸಿರುವ ರಾಜ್ಯ ಮಹಿಳಾ ಆಯೋಗವು ಈ ಸಂಬಂಧ ಬೆಂಗಳೂರು ನಗರದ ಪೊಲೀಸ್ ಕಮಿಷನರ್ ಅವರಿಗೆ ಅಧಿಕೃತ ಪತ್ರ ಬರೆದಿದೆ. ದೂರು ಅರ್ಜಿಯಲ್ಲಿನ ವಿಷಯವನ್ನು ನಿಯಮಾನುಸಾರ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಆಯೋಗವು ಕಮಿಷನರ್‌ಗೆ ಮನವಿ ಮಾಡಿದೆ. ಅಲ್ಲದೆ, ಈ ಕುರಿತು ಕೈಗೊಂಡ ಕ್ರಮದ ವರದಿಯನ್ನು ತಕ್ಷಣವೇ ಮಹಿಳಾ ಆಯೋಗಕ್ಕೆ ಸಲ್ಲಿಸುವಂತೆಯೂ ಪತ್ರದಲ್ಲಿ ಸ್ಪಷ್ಟವಾಗಿ ಸೂಚಿಸಲಾಗಿದೆ.
ಇದನ್ನೂ ಓದಿ : ಸಂಪುಟ ಪುನಾರಚನೆಗೆ ‘ಹೈ’ ಬ್ರೇಕ್ – ಯಾವುದೇ ಬದಲಾವಣೆ ಬೇಡ ಎಂದು ಸಿಎಂಗೆ ಹೈಕಮಾಂಡ್ ಸೂಚನೆ!







