ಸಂಪುಟ ಪುನಾರಚನೆಗೆ ‘ಹೈ’ ಬ್ರೇಕ್ – ಯಾವುದೇ ಬದಲಾವಣೆ ಬೇಡ ಎಂದು ಸಿಎಂಗೆ ಹೈಕಮಾಂಡ್‌ ಸೂಚನೆ!

ನವದೆಹಲಿ : ಸಿಎಂ ಸಿದ್ದರಾಮಯ್ಯ ಸಚಿವ ಸಂಪುಟ ಪುನಾರಚನೆ ಕುರಿತು ಚರ್ಚಿಸಲು ನವದೆಹಲಿಗೆ ತೆರಳಿದ್ದರೂ, ಅವರಿಗೆ ಕಾಂಗ್ರೆಸ್ ಹೈಕಮಾಂಡ್‌ನಿಂದ ಗ್ರೀನ್ ಸಿಗ್ನಲ್ ಸಿಕ್ಕಿಲ್ಲ. ಸದ್ಯಕ್ಕೆ ಯಾವುದೇ ಬದಲಾವಣೆ ಮಾಡುವಂತಿಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ಸೂಚನೆ ನೀಡಿದ್ದು, ಈ ಮೂಲಕ ಸಂಪುಟ ಪುನಾರಚನೆಗೆ ತಾತ್ಕಾಲಿಕ ಬ್ರೇಕ್ ಬಿದ್ದಿದೆ.

ನವೆಂಬರ್ ಕ್ರಾಂತಿ ಅಥವಾ ಸಂಪುಟದಲ್ಲಿ ಯಾವುದೇ ಮಹತ್ವದ ಬದಲಾವಣೆಯ ನಿರೀಕ್ಷೆಯಲ್ಲಿದ್ದ ಸಿದ್ದರಾಮಯ್ಯಗೆ ನಿರಾಶೆಯಾಗಿದೆ. ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ನಡೆದ ಮಹತ್ವದ ಚರ್ಚೆಯಲ್ಲಿ, ಪಕ್ಷದ ಹಿತದೃಷ್ಟಿಯಿಂದ ಯಾವುದೇ ಬದಲಾವಣೆ ಮಾಡುವುದು ಸದ್ಯಕ್ಕೆ ಬೇಡ ಎಂದು ಸೂಚಿಸಿದ್ದಾರೆ. ರಾಜ್ಯದಲ್ಲಿ ಈಗಿರುವಂತೆ ಯಥಾಸ್ಥಿತಿ ಮುಂದುವರಿಸಿಕೊಂಡು ಹೋಗುವಂತೆ ಸಿಎಂಗೆ ಸೂಚನೆ ನೀಡಲಾಗಿದೆ. ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಒಟ್ಟಾಗಿ ಮುಂದುವರಿಯಬೇಕು ಎಂದು ವರಿಷ್ಠರು ಕಿವಿಮಾತು ಹೇಳಿದ್ದಾರೆ.

ಸದ್ಯಕ್ಕೆ ಸಂಪುಟ ಪುನಾರಚನೆ ತೀರ್ಮಾನವನ್ನು ಮುಂದೂಡಿರುವ ಖರ್ಗೆಯವರು, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಮತ್ತು ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರೊಂದಿಗೆ ಚರ್ಚೆ ನಡೆಸುವುದಾಗಿ ತಿಳಿಸಿದ್ದಾರೆ. ಅಲ್ಲದೆ, ರಾಹುಲ್ ಗಾಂಧಿ ಅವರೊಂದಿಗೆ ಚರ್ಚಿಸಿ ಸೂಕ್ತ ಸಮಯದಲ್ಲಿ ಸಚಿವ ಸಂಪುಟ ವಿಸ್ತರಣೆ ಅಥವಾ ಪುನಾರಚನೆಯ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳುವುದಾಗಿ ಖರ್ಗೆಯವರು ಸಿಎಂಗೆ ಮಹತ್ವದ ಸಲಹೆ ನೀಡಿ ವಾಪಸ್‌ ಕಳುಹಿಸಿದ್ದಾರೆ. ರಾಜ್ಯ ಕಾಂಗ್ರೆಸ್ ಸರ್ಕಾರವು ಇದೇ ನವೆಂಬರ್ 20ಕ್ಕೆ ತನ್ನ ಆಡಳಿತದ ಎರಡೂವರೆ ವರ್ಷಗಳನ್ನು ಪೂರೈಸುತ್ತಿರುವ ಸಂದರ್ಭದಲ್ಲಿ ಈ ನಿರ್ಧಾರ ಹೊರಬಿದ್ದಿದೆ.

ಇದನ್ನೂ ಓದಿ : ವೇದಿಕೆ ಮೇಲೆ ತನ್ನದೇ ಪಕ್ಷದ ಕಾರ್ಯಕರ್ತನಿಗೆ ಕಪಾಳಮೋಕ್ಷ ಮಾಡಿದ ‘ಕೈ’ ಶಾಸಕ ಡಿ.ರವಿಶಂಕರ್!

Btv Kannada
Author: Btv Kannada

Read More