ಬಳ್ಳಾರಿ : ಸಂಡೂರು CPI ಮಹೇಶ್ ಗೌಡ ವಿರುದ್ಧ FIR ದಾಖಲಿಸುವಂತೆ ಕರ್ನಾಟಕ ಹೈಕೋರ್ಟ್ ಆದೇಶ ನೀಡಿದೆ. ಆಗಸ್ಟ್ 24 ರಂದು ಸಂಡೂರು ಸಿಪಿಐ ಮಹೇಶಗೌಡ ಹಾಗೂ ವಿವೇಕಾನಂದ ಎಂಬುವರ ನಡುವೆ ವಾಗ್ವಾದ ನಡೆದಿದ್ದು, ಈ ವೇಳೆ ವಾದ ತಾರಕಕ್ಕೇರಿ, ಸಿಪಿಐ ಮಹೇಶಗೌಡ ಅವರು ವಿವೇಕಾನಂದ ಮೇಲೆ ಹಲ್ಲೆ ನಡೆಸಿದ್ದಾರೆ.

ಹಲ್ಲೆಗೊಳಗಾದ ವಿವೇಕಾನಂದ ಅವರು ಸಿಪಿಐ ವಿರುದ್ಧ ಕ್ರಮ ಕೈಗೊಳ್ಳುವಂತೆ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಆದರೆ, ದೂರು ನೀಡಿದರೂ ಪೊಲೀಸ್ ಅಧಿಕಾರಿಗಳು ಪ್ರಕರಣ ದಾಖಲಿಸಿ ಯಾವುದೇ ಕಾನೂನು ಕ್ರಮಕ್ಕೆ ಮುಂದಾಗಿರಲಿಲ್ಲ. ಹಾಗಾಗಿ ವಿವೇಕಾನಂದ ತಮ್ಮ ಮೆಡಿಕಲ್ ರಿಪೋರ್ಟ್ ಸಮೇತ ಕರ್ನಾಟಕ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು.

ಅರ್ಜಿಯ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್, ಸಾರ್ವಜನಿಕರ ಮೇಲೆ ಹಲ್ಲೆ ನಡೆಸಿರುವ ಆರೋಪ ಹೊತ್ತಿರುವ ಸಿಪಿಐ ಮಹೇಶಗೌಡ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಆದೇಶಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕೂಡಲೇ FIR ದಾಖಲಿಸುವಂತೆ ಹೈಕೋರ್ಟ್, ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.

ಇದನ್ನೂ ಓದಿ : ಬಾಂಗ್ಲಾ ಮಾಜಿ ಪ್ರಧಾನಿ ಶೇಖ್ ಹಸೀನಾಗೆ ಗಲ್ಲು ಶಿಕ್ಷೆ!







