ನಮ್ಮ ಮೆಟ್ರೋ ಪ್ರಿಯರಿಗೆ ಗುಡ್​ನ್ಯೂಸ್.. ಬೆಂಗಳೂರು-ತುಮಕೂರು ಮೆಟ್ರೋ ವಿಸ್ತರಣೆಗೆ ಮಹತ್ವದ ಹೆಜ್ಜೆ!

ಬೆಂಗಳೂರು : ನಮ್ಮ ಮೆಟ್ರೋ ಪ್ರಯಾಣಿಕರಿಗೆ ಇದೀಗ ಮತ್ತೊಂದು ಗುಡ್‌ನ್ಯೂಸ್ ಸಿಕ್ಕಿದೆ. ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL) ಈಗ ಮೆಟ್ರೋ ಮಾರ್ಗವನ್ನು ತುಮಕೂರಿನವರೆಗೆ ವಿಸ್ತರಿಸುವ ಮಹತ್ವದ ಯೋಜನೆಯನ್ನು ಕೈಗೆತ್ತಿಕೊಂಡಿದೆ. ಈ ಸಂಬಂಧ ವಿವರವಾದ ಯೋಜನಾ ವರದಿ (DPR) ತಯಾರಿಸಲು ಟೆಂಡರ್ ಪ್ರಕ್ರಿಯೆಯನ್ನು ಆರಂಭಿಸಿದೆ.

ಒಟ್ಟು 59.6 ಕಿ.ಮೀ. ದೂರದ ಈ ಮಾರ್ಗವು ಬೆಂಗಳೂರಿನ ಮಾದಾವರದಿಂದ ತುಮಕೂರುವರೆಗೆ ಸಂಪರ್ಕ ಕಲ್ಪಿಸಲಿದೆ. ಈ ಹೊಸ ಕಾರಿಡಾರ್ ನೆಲಮಂಗಲ, ದಾಬಸ್‌ಪೇಟೆ ಮತ್ತು ಕ್ಯಾತಸಂದ್ರದಂತಹ ಪ್ರಮುಖ ಪ್ರದೇಶಗಳ ಮೂಲಕ ಹಾದು ಹೋಗಲಿದೆ. BMRCL DPR ಸಿದ್ಧಪಡಿಸಲು ಬಿಡ್‌ಗಳನ್ನು ಆಹ್ವಾನಿಸಿದೆ. ಆಸಕ್ತ ಕಂಪನಿಗಳು ನವೆಂಬರ್ 20ರವರೆಗೆ ಬಿಡ್ ಸಲ್ಲಿಸಬಹುದು. ನವೆಂಬರ್ 21 ರಂದು ಟೆಂಡರ್ ಕರೆದು ಅಂತಿಮಗೊಳಿಸುವ ಸಾಧ್ಯತೆ ಇದೆ. DPR ಸಿದ್ಧಪಡಿಸಲು ಆಯ್ದ ಕಂಪನಿಗೆ 5 ತಿಂಗಳ ಕಾಲಾವಕಾಶ ನೀಡಲಾಗುತ್ತದೆ.

ಈ ಬೃಹತ್ ಯೋಜನೆಯನ್ನು ಸಾರ್ವಜನಿಕ-ಖಾಸಗಿ ಸಹಭಾಗಿತ್ವ (PPP) ಮಾದರಿಯಲ್ಲಿ ಅಭಿವೃದ್ಧಿಪಡಿಸಲು BMRCL ಯೋಜಿಸುತ್ತಿದೆ. ಈ ಯೋಜನೆಯ ಮೊದಲ ಹಂತಕ್ಕೆ ಅಂದಾಜು ₹20,649 ಕೋಟಿ ವೆಚ್ಚವಾಗುವ ನಿರೀಕ್ಷೆಯಿದೆ. ಈ ಯೋಜನೆಗೆ 2024-25ನೇ ಸಾಲಿನ ಬಜೆಟ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಸ್ತಾಪಿಸಿದ್ದರು.

ಇದನ್ನೂ ಓದಿ : ಸೌದಿ ಅರೇಬಿಯಾದಲ್ಲಿ ಭೀಕರ ಬಸ್‌ ದುರಂತ – 42 ಭಾರತೀಯ ಹಜ್‌ ಯಾತ್ರಿಕರು ಸಜೀವ ದಹನ!

Btv Kannada
Author: Btv Kannada

Read More