ಕುಮಾರಸ್ವಾಮಿ ಲೇಔಟ್ ಪೊಲೀಸರ ಈ ಕ್ರಮಕ್ಕೆ ರಾಜ್ಯದಲ್ಲೆಡೆ ವ್ಯಾಪಕ ಶ್ಲಾಘನೆ!

ಬೆಂಗಳೂರು : ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ ಪೊಲೀಸ್ ತಂಡದ ಮಾನವೀಯ ಮತ್ತು ಸಮಯೋಚಿತ ಕಾರ್ಯಾಚರಣೆಯ ಮೂಲಕ ಕಳೆದುಹೋಗಿದ್ದ 13 ವರ್ಷದ ಬಾಲಕಿ ಹರಿಣಿಯನ್ನು ಆಕೆಯ ಅಜ್ಜಿ ಮನೆಗೆ ಸುರಕ್ಷಿತವಾಗಿ ತಲುಪಿಸಲಾಗಿದೆ. ಈ ಕಾರ್ಯಕ್ಕೆ ಸಾರ್ವಜನಿಕ ವಲಯದಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

ಮಂಡ್ಯದ ಬಿಳಿದೇಗಲು ವಸತಿ ನಿಲಯದಲ್ಲಿದ್ದ 13 ವರ್ಷದ ಬಾಲಕಿ ಹರಿಣಿ, ಶುಕ್ರವಾರ ಮಧ್ಯಾಹ್ನ ಬೆಂಗಳೂರಿನ ಕೋಣನಕುಂಟೆಯಲ್ಲಿರುವ ತನ್ನ ಅಜ್ಜಿ ಮನೆಗೆ ಹೋಗಲು ಬನಶಂಕರಿ ಬಸ್ ನಿಲ್ದಾಣಕ್ಕೆ ಆಗಮಿಸಿದ್ದಳು. ಆದರೆ, ಬಸ್ ನಿಲ್ದಾಣದಲ್ಲಿ ಇಳಿದ ನಂತರ ಆಕೆಗೆ ಅಜ್ಜಿ ಮನೆಗೆ ಹೋಗುವ ಸರಿಯಾದ ವಿಳಾಸ ಅಥವಾ ಮಾರ್ಗ ತಿಳಿದಿರಲಿಲ್ಲ. ಗೊಂದಲಕ್ಕೊಳಗಾದ ಬಾಲಕಿ ಬನಶಂಕರಿ ದೇವಸ್ಥಾನದ ಮುಂಭಾಗದಲ್ಲಿ ಒಬ್ಬಂಟಿಯಾಗಿ ಕುಳಿತುಕೊಂಡಿದ್ದಳು.

ಬಾಲಕಿಯು ಒಬ್ಬಳೇ ಕುಳಿತಿರುವುದನ್ನು ಗಮನಿಸಿದ ಜಾಗರೂಕ ಸಾರ್ವಜನಿಕರೊಬ್ಬರು ತಕ್ಷಣವೇ ತುರ್ತು ಸಂಖ್ಯೆ 112ಕ್ಕೆ ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. 112 ನಿಯಂತ್ರಣ ಕೊಠಡಿಯಿಂದ ಈ ದೂರನ್ನು ಹೊಯ್ಸಳ 154 ಗಸ್ತು ವಾಹನದ ತಂಡಕ್ಕೆ ವರ್ಗಾಯಿಸಲಾಯಿತು. ಹೊಯ್ಸಳ 154 ರಲ್ಲಿದ್ದ ಪೊಲೀಸ್ ಸಿಬ್ಬಂದಿಯಾದ, ಎಎಸ್‌ಐ ಜಯರಾಮಯ್ಯ, ಹೆಚ್‌ಸಿ 11331 ಮಹೇಶ್ ಸಿ ಎನ್ ತಕ್ಷಣ ಸ್ಥಳಕ್ಕೆ ಧಾವಿಸಿದರು. ಬನಶಂಕರಿ ದೇವಸ್ಥಾನದ ಬಳಿ ಕುಳಿತಿದ್ದ ಬಾಲಕಿಯನ್ನು ಕಂಡು ಮಾತುಕತೆ ನಡೆಸಿದರು. ಆಕೆಯ ಮೂಲಕವೇ ಕೋಣನಕುಂಟೆಯಲ್ಲಿರುವ ಅಜ್ಜಿ ಕಮಲಮ್ಮ ಅವರ ವಿಳಾಸವನ್ನು ಪತ್ತೆಹಚ್ಚಿದರು. ಬಾಲಕಿಯ ಸುರಕ್ಷತೆಯನ್ನು ಖಚಿತಪಡಿಸಿದ ಪೊಲೀಸರು, ನಂತರ ಆಕೆಯನ್ನು ತಮ್ಮ ವಾಹನದಲ್ಲಿ ಕರೆದುಕೊಂಡು ಹೋಗಿ ರಾತ್ರಿ ಸುಮಾರು 11.30 ಗಂಟೆಗೆ ಅಜ್ಜಿ ಮನೆಗೆ ಸುರಕ್ಷಿತವಾಗಿ ತಲುಪಿಸಿದರು.

.ಬಾಲಕಿಯನ್ನು ರಕ್ಷಿಸಿ, ಆತಂಕದಲ್ಲಿದ್ದ ಕುಟುಂಬಕ್ಕೆ ನೆರವಾದ ಎಎಸ್‌ಐ ಜಯರಾಮಯ್ಯ ಮತ್ತು ಹೆಚ್‌ಸಿ ಮಹೇಶ್ ಸಿ ಎನ್ ಅವರ ಸಮಯೋಚಿತ ಕಾರ್ಯಕ್ಕೆ ಸಾರ್ವಜನಿಕರು ಮತ್ತು ನಾಗರಿಕರು ಅಭಿನಂದನೆ ಸಲ್ಲಿಸಿದ್ದಾರೆ.

ಇದನ್ನೂ ಓದಿ : ರಾಜ್ಯ ಸಚಿವ ಸಂಪುಟ ಪುನಾರಚನೆಗೆ ಹೈ ಕಮಾಂಡ್ ಗ್ರೀನ್ ಸಿಗ್ನಲ್ – ನಾಳೆ ಅಂತಿಮ ನಿರ್ಧಾರ.. 12 ಸಚಿವರಿಗೆ ಕೊಕ್?

Btv Kannada
Author: Btv Kannada

Read More