ಬಿಹಾರ ವಿಧಾನಸಭೆ ಚುನಾವಣೆ ಫಲಿತಾಂಶದ ಬೆನ್ನಲ್ಲೇ ಕಾಂಗ್ರೆಸ್ ರಾಜ್ಯ ರಾಜಕಾರಣದಲ್ಲಿ ಮಹತ್ವದ ಬದಲಾವಣೆಗೆ ಮುಂದಾಗಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟವನ್ನು ಪುನಾರಚಿಸಲು ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಿದೆ.
ಸಚಿವ ಸಂಪುಟ ಪುನಾರಚನೆಯ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರೊಂದಿಗೆ 45 ನಿಮಿಷಗಳ ಕಾಲ ಮಹತ್ವದ ಚರ್ಚೆ ನಡೆಸಿದ್ದಾರೆ. ಬಿಹಾರ ಚುನಾವಣಾ ಫಲಿತಾಂಶದಿಂದ ರಾಹುಲ್ ಗಾಂಧಿ, ಸಿಎಂ ಸಿದ್ದರಾಮಯ್ಯ ಸಚಿವ ಸಂಪುಟ ಪುನಾರಚನೆಯ ಅಂತಿಮ ತೀರ್ಮಾನಕ್ಕಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡುವಂತೆ ರಾಹುಲ್ ಗಾಂಧಿ ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ಸೂಚನೆ ನೀಡಿದ್ದಾರೆ.

ರಾಹುಲ್ ಗಾಂಧಿ ಅವರ ಸೂಚನೆಯಂತೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾಳೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರನ್ನು ಭೇಟಿ ಮಾಡಿ ಚರ್ಚಿಸಲಿದ್ದಾರೆ. ಈ ಚರ್ಚೆಯ ನಂತರವೇ ಸಚಿವ ಸಂಪುಟ ಪುನಾರಚನೆಯ ಕುರಿತು ಅಂತಿಮ ತೀರ್ಮಾನ ಮಾಲಾಗುತ್ತೆ. ರಾಜ್ಯ ಸಚಿವ ಸಂಪುಟದಲ್ಲಿ 8 ರಿಂದ 12 ಮಂದಿ ಸಚಿವರನ್ನು ಬದಲಾವಣೆ ಮಾಡುವ ಸಾಧ್ಯತೆ ಇದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟಕ್ಕೆ ಹೈಕಮಾಂಡ್ ಸೂಚನೆಯ ಮೇರೆಗೆ ‘ಸರ್ಜರಿ’ ನಡೆಯುವುದು ಬಹುತೇಕ ಖಚಿತವಾಗಿದ್ದು, ಹಾಲಿ ಸಚಿವರಲ್ಲಿ ಯಾರಿಗೆ ಕೊಕ್ ನೀಡಿ, ಹೊಸಬರಿಗೆ ‘ಜಾಕ್‌ಪಾಟ್’ ಹೊಡೆಯಲಿದೆ ಎಂಬ ಚರ್ಚೆಗಳು ರಾಜಕೀಯ ವಲಯದಲ್ಲಿ ಜೋರಾಗಿವೆ. ಸಚಿವ ಸಂಪುಟ ಪುನಾರಚನೆಯ ಸುಳಿವು ಸಿಗುತ್ತಿದ್ದಂತೆಯೇ ಹಲವು ಹಿರಿಯ ಮತ್ತು ಯುವ ಶಾಸಕರು ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದಾರೆ.
ಬೇಳೂರು ಗೋಪಾಲ ಕೃಷ್ಣ, ಬಿ.ಕೆ. ಹರಿಪ್ರಸಾದ್, ಎನ್. ಎ. ಹ್ಯಾರಿಸ್, ಸಲೀಂ ಅಹ್ಮದ್, ಆರ್. ವಿ. ದೇಶಪಾಂಡೆ, ನಾಗೇಂದ್ರ, ಎಂ. ಕೃಷ್ಣಪ್ಪ, ಮಾಗಡಿ ಬಾಲಕೃಷ್ಣ, ಲಕ್ಷ್ಮಣ ಸವದಿ, ಎ. ಎಸ್. ಪೊನ್ನಣ್ಣ, ರಿಜ್ವಾನ್ ಅರ್ಷದ್, ಶಿವಲಿಂಗೇಗೌಡ, ರೂಪಕಲಾ ಶಶಿಧರ್, ಮಾಲೂರು ನಂಜೇಗೌಡ ಸೇರಿ ಹಲವು ನಾಯಕರು ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ಸಚಿವ ಸ್ಥಾನದ ಆಕಾಂಕ್ಷಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ ತಮ್ಮ ಆಕಾಂಕ್ಷೆಯನ್ನು ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : ಮಡಿಕೇರಿ : ಪತ್ನಿಗೆ ವಿಡಿಯೋ ಕಾಲ್ ಮಾಡಿ ಪತಿ ಲೈವ್ ಸೂಸೈಡ್!







