ಅರಣ್ಯ ಇಲಾಖೆ ತಪಾಸಣೆ ವೇಳೆ ಕಾರಿನ ಹಿಂಭಾಗದಲ್ಲಿ ಮಹಿಳೆಯ ಶವ ಪತ್ತೆ – ಮೂವರ ಬಂಧನ!

ಕೊಡಗು : ಕೊಡಗು ಜಿಲ್ಲೆಯ ಸಿದ್ದಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಮಾಲ್ದಾರೆ-ಲಿಂಗಾಪುರ ಗಡಿ ಚೆಕ್‌ಪೋಸ್ಟ್‌ನಲ್ಲಿ ಆತಂಕಕಾರಿ ಘಟನೆ ನಡೆದಿದೆ. ಅರಣ್ಯ ಇಲಾಖೆ ಸಿಬ್ಬಂದಿಯ ತಪಾಸಣೆ ವೇಳೆ, ಒಂದು ಕಾರಿನೊಳಗೆ ಮಹಿಳೆಯ ಶವ ಪತ್ತೆಯಾಗಿದೆ. ಕಾರಿನ ಹಿಂಭಾಗದಲ್ಲಿ ಮೃತದೇಹ ಇರುವುದು ಬಯಲಾಗಿದ್ದು, ಈ ಸಂಬಂಧ ಕಾರಿನಲ್ಲಿದ್ದ ಮೂವರನ್ನು ತಕ್ಷಣವೇ ಬಂಧಿಸಿ ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ.

ಮೃತ ಮಹಿಳೆಯನ್ನು ಹರಿಯಾಣ ಮೂಲದ, ಮೈಸೂರಿನಲ್ಲಿ ಪತಿಯೊಂದಿಗೆ ವಾಸವಿದ್ದ 45 ವರ್ಷದ ನಾನ್ಕಿದೇವಿ ಎಂದು ಗುರುತಿಸಲಾಗಿದೆ. ಶವ ಸಾಗಾಟ ಮಾಡುತ್ತಿದ್ದ ಈ ಘಟನೆ ತೀವ್ರ ಅನುಮಾನಗಳಿಗೆ ಎಡೆಮಾಡಿಕೊಟ್ಟಿದ್ದು, ಮಹಿಳೆಯ ಸಾವಿನ ಹಿಂದಿನ ಕಾರಣ ಮತ್ತು ಶವವನ್ನು ಮೈಸೂರಿನಿಂದ ಕೊಡಗಿನತ್ತ ಸಾಗಿಸುತ್ತಿದ್ದ ಉದ್ದೇಶದ ಬಗ್ಗೆ ಪೊಲೀಸರು ತೀವ್ರ ವಿಚಾರಣೆ ನಡೆಸಿದ್ದಾರೆ.

ಮಾಹಿತಿ ತಿಳಿಯುತ್ತಿದ್ದಂತೆಯೇ ಸಿದ್ದಾಪುರ ಪೊಲೀಸ್ ಠಾಣಾಧಿಕಾರಿ ಮಂಜುನಾಥ್ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿ ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.

ಇದನ್ನೂ ಓದಿ : ಹುಲಿ ದಾಳಿ ನಿಯಂತ್ರಣಕ್ಕೆ ಅರಣ್ಯ ಇಲಾಖೆಯಿಂದ ‘ಸೂಪರ್ ಪ್ಲಾನ್’ – ಕಾಡಂಚಿನ ಜನರಿಗೆ ವಿಶೇಷ ಫೇಸ್ ಮಾಸ್ಕ್ ವಿತರಣೆ!

Btv Kannada
Author: Btv Kannada

Read More