ಹುಲಿ ದಾಳಿ ನಿಯಂತ್ರಣಕ್ಕೆ ಅರಣ್ಯ ಇಲಾಖೆಯಿಂದ ‘ಸೂಪರ್ ಪ್ಲಾನ್’ – ಕಾಡಂಚಿನ ಜನರಿಗೆ ವಿಶೇಷ ಫೇಸ್ ಮಾಸ್ಕ್ ವಿತರಣೆ!

ಮೈಸೂರು : ಹುಲಿ ದಾಳಿಗಳು ಹೆಚ್ಚುತ್ತಿರುವ ಕಾಡಂಚಿನ ಪ್ರದೇಶಗಳಲ್ಲಿ ಸ್ಥಳೀಯ ಜನರಲ್ಲಿ ಆತ್ಮಸ್ಥೈರ್ಯ ತುಂಬಲು ಮತ್ತು ದಾಳಿಗಳನ್ನು ನಿಯಂತ್ರಿಸಲು, ಅರಣ್ಯ ಇಲಾಖೆಯು ವಿನೂತನ ಮತ್ತು ವಿಶೇಷ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರ ಸೂಚನೆ ಮೇರೆಗೆ, ಇದರ ಭಾಗವಾಗಿ ಮೈಸೂರು ವಿಭಾಗದ ಹೆಡಿಯಾಲ ಅರಣ್ಯ ಪ್ರದೇಶದ ಸುತ್ತಮುತ್ತಲ ಗ್ರಾಮಗಳಲ್ಲಿ ಸಾವಿರಾರು ಫೇಸ್ ಮಾಸ್ಕ್‌ ವಿತರಿಸಲಾಗುತ್ತಿದೆ.

ಕಾಡಂಚಿನ ಪ್ರದೇಶಗಳಲ್ಲಿ ಹುಲಿ ಮತ್ತು ಇತರ ಕಾಡು ಪ್ರಾಣಿಗಳಿಂದ ಜನರ ರಕ್ಷಣೆ ಅರಣ್ಯ ಇಲಾಖೆಗೆ ಒಂದು ದೊಡ್ಡ ಸವಾಲಾಗಿದೆ. ಹೆಡಿಯಾಲ ಗ್ರಾಮದ ಜನರು ಕೃಷಿ ಚಟುವಟಿಕೆಗಳಿಗೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ. ಈ ಸಮಸ್ಯೆಯನ್ನು ನಿವಾರಿಸಲು, ಇಲಾಖೆಯು ಫೇಸ್ ಮಾಸ್ಕ್ ತಂತ್ರವನ್ನು ಅನುಸರಿಸಿ. ಕೆಲಸಕ್ಕೆ ತೆರಳುವಾಗ ಈ ಮುಖವಾಡಗಳನ್ನು ತಲೆಯ ಹಿಂಭಾಗದಲ್ಲಿ ಧರಿಸುವಂತೆ ಇಲಾಖೆ ಜನರಲ್ಲಿ ಮನವಿ ಮಾಡಿದೆ. ತಲೆಯ ಹಿಂಭಾಗದಲ್ಲಿ ಮನುಷ್ಯನ ಮುಖವನ್ನು ನೋಡಿದಾಗ ಕಾಡು ಪ್ರಾಣಿಗಳು ಗೊಂದಲಕ್ಕೆ ಒಳಗಾಗಿ, ದಾಳಿ ನಡೆಸಲು ಹಿಂಜರಿಯುತ್ತವೆ ಎಂಬುದು ಈ ವಿನೂತನ ತಂತ್ರದ ಹಿಂದಿರುವ ಮೂಲ ಆಶಯ.

ಸಚಿವ ಈಶ್ವರ್ ಖಂಡ್ರೆ ಅವರ ಕಟ್ಟುನಿಟ್ಟಿನ ಆದೇಶದಂತೆ, ಸಿ.ಸಿ.ಎಫ್. (CCF) ಪ್ರಭಾಕರನ್ ಮತ್ತು ಎ.ಸಿ.ಎಫ್. (ACF) ಪರಮೇಶ್ ಅವರ ನೇತೃತ್ವದಲ್ಲಿ ಈ ಜಾಗೃತಿ ಕಾರ್ಯಕ್ರಮ ಮತ್ತು ಮಾಸ್ಕ್ ವಿತರಣಾ ಅಭಿಯಾನ ನಡೆಯುತ್ತಿದೆ. ಕಳೆದ ಎರಡು ದಿನಗಳಲ್ಲಿ 10 ಸಾವಿರಕ್ಕೂ ಹೆಚ್ಚು ಫೇಸ್ ಮಾಸ್ಕ್‌ಗಳನ್ನು ಕಾಡಂಚಿನ ಗ್ರಾಮಗಳಲ್ಲಿ ವಿತರಿಸಲಾಗಿದೆ.

ಇದನ್ನೂ ಓದಿ : ರೌಡಿಶೀಟರ್‌ಗಳ ನಡುವೆ ಗ್ಯಾಂಗ್ ವಾರ್, ಕೊಲೆಗೆ ಸುಪಾರಿ ಆರೋಪ – 5 ಲಕ್ಷ ಅಡ್ವಾನ್ಸ್ ಪಡೆದಿದ್ದ ಇಬ್ಬರು ವಶ!

Btv Kannada
Author: Btv Kannada

Read More