ಸಂಚಿತ್ ಸಂಜೀವ್ ನಟನೆಯ ‘ಮ್ಯಾಂಗೋ ಪಚ್ಚ’ ಆಡಿಯೋ ರೈಟ್ಸ್ ದಾಖಲೆ ಮೊತ್ತಕ್ಕೆ ಸೇಲ್!

ಕಿಚ್ಚ ಸುದೀಪ್ ಅಳಿಯ ಸಂಚಿತ್ ಸಂಜೀವ್ ಅಭಿನಯದ ಬಹುನಿರೀಕ್ಷಿತ ‘ಮ್ಯಾಂಗೋ ಪಚ್ಚ’ ಸಿನಿಮಾದಿಂದ ಭರ್ಜರಿ ಸುದ್ದಿ ಹೊರಬಿದ್ದಿದೆ. ಇತ್ತೀಚಿಗಷ್ಟೆ ಟೀಸರ್ ಮೂಲಕ ಅಭಿಮಾನಿಗಳ ನಿರೀಕ್ಷೆ ಹೆಚ್ಚಿಸಿದ್ದ ಮ್ಯಾಂಗೋ ಪಚ್ಚ ಇದೀಗ ಆಡಿಯೋ ಮಾರಾಟ ವಿಚಾರದಲ್ಲಿ ದಾಖಲೆ ಬರೆದಿದೆ. ಮ್ಯಾಂಗೋ ಪಚ್ಚ ಸಿನಿಮಾದ ಆಡಿಯೋ ರೈಟ್ಸ್ ದೊಡ್ಡ ಮೊತ್ತಕ್ಕೆ ಮಾರಾಟವಾಗಿದೆ. ಚೊಚ್ಚಲ ಹೀರೋ ಒಬ್ಬರ ಸಿನಿಮಾದ ಆಡಿಯೋ ದಾಖಲೆ ಮೊತ್ತಕ್ಕೆ ಮಾರಾಟ ಆಗಿರುವುದು ಇದೇ ಮೊದಲು.

ಮ್ಯಾಂಗೋ ಪಚ್ಚ ಸಂಚಿತ್ ಸಂಜೀವ್ ನಟನೆಯ ಮೊದಲ ಸಿನಿಮಾ. ಈ ಸಿನಿಮಾ ಮೂಲಕ ಸಂಚಿತ್ ಹೀರೋ ಆಗಿ ಸಿನಿಮಾರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಈಗಾಗಲೇ ವಿಭಿನ್ನ ಲುಕ್ ಮೂಲಕ ಸಂಚಿತ್ ಸಿನಿ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ಇದೀಗ ಭಾರಿ ಮೊತ್ತಕ್ಕೆ ಆಡಿಯೋ ರೈಟ್ಸ್ ಸೇಲ್ ಆಗಿರುವುದು ಸಿನಿಮಾದ ಮೇಲಿನ ಕುತುಹೂಲವನ್ನು ಮತ್ತಷ್ಟು ಹೆಚ್ಚಿಸಿದೆ.

ಅಂದಹಾಗೆ ಮ್ಯಾಂಗೋ ಪಚ್ಚ ಸಿನಿಮಾದ ಆಡಿಯೋ ರೈಟ್ಸ್ ಸರಿಗಮ ಸಂಸ್ಥೆ ಪಾಲಾಗಿದೆ. ಸರಿಗಮ ಬರೋಬ್ಬರಿ 1.2 ಕೋಟಿ ರೂಪಾಯಿಗೆ ಆಡಿಯೋ ಹಕ್ಕನ್ನು ಖರೀದಿ ಮಾಡಿದೆ. ಇತ್ತೀಚಿನ ದಿನಗಳಲ್ಲಿ ಕನ್ನಡ ಸಿನಿಮಾಗಳ ಆಡಿಯೋ ದೊಡ್ಡ ಮಟ್ಟಕ್ಕೆ ಸೇಲ್ ಆಗಿರುವ ಸಂಖ್ಯೆ ತುಂಬಾ ವಿರಳ. ಅದರಲ್ಲೂ ಹೊಸ ಹೀರೋಗಳ ಸಿನಿಮಾದ ಆಡಿಯೋ ಇಷ್ಟು ದೊಡ್ಡ ಮಟ್ಟಕ್ಕೆ ಸೇಲ್ ಆಗಿರುವುದು ಇದೇ ಮೊದಲು. ಹಾಗಾಗಿ ಇದು ನಿಜಕ್ಕೂ ಸಿನಿಮಾತಂಡಕ್ಕೆ ಹೆಮ್ಮೆಯ ವಿಚಾರ. ಮ್ಯಾಂಗೋ ಪಚ್ಚ ಸಿನಿಮಾಗೆ ಕನ್ನಡಿಗರ ನೆಚ್ಚಿನ ಸಂಗೀತ ನಿರ್ದೇಶಕ ಚರಣ್ ರಾಜ್ ಸಂಗೀತ ಸಂಯೋಜನೆ ಮಾಡಿದ್ದಾರೆ.

ಮ್ಯಾಂಗೋ ಪಚ್ಚ ವಿವೇಕ ನಿರ್ದೇಶನದ ಚೊಚ್ಚಲ ಸಿನಿಮಾವಾಗಿದೆ. ಮೈಸೂರು ಮೂಲದ ಕ್ರೈಂ ಥ್ರಿಲ್ಲರ್ ಸಿನಿಮಾವಾಗಿದ್ದು, 2001 ರಿಂದ 2011ರ ಅವಧಿಯಲ್ಲಿ ಮೈಸೂರಿನಲ್ಲಿ ನಡೆದ ಪ್ರಮುಖ ಘಟನೆಗಳು ಈ ಸಿನಿಮಾದಲ್ಲಿದೆ. ಬಹುತೇಕ ಚಿತ್ರೀಕರಣ ಮೈಸೂರಿನಲ್ಲೇ ಮಾಡಲಾಗಿದೆ.

ಈಗಾಗಲೇ ಚಿತ್ರೀಕರಣ ಮುಗಿಸಿರುವ ಮ್ಯಾಂಗೋ ಪಚ್ಚ ಚಿತ್ರಮಂದಿರಕ್ಕೆ ಎಂಟ್ರಿ ಕೊಡಲು ತಯಾರಿ ನಡೆಸುತ್ತಿದೆ. ಮ್ಯಾಂಗೋ ಪಚ್ಚ ಚಿತ್ರಕ್ಕೆ ಕೆಆರ್‌ಜಿ ಮತ್ತು ಕಿಚ್ಚ ಸುದೀಪ್ ಅವರ ಸುಪ್ರಿಯಾನ್ವಿ ಪ್ರೊಡಕ್ಷನ್ಸ್ ಜಂಟಿಯಾಗಿ ನಿರ್ಮಾಣ ಮಾಡುತ್ತಿರುವುದು ವಿಶೇಷ. ಸಂಚಿ ಮೊದಲ ಸಿನಿಮಾಗೆ ನಾಯಕಿಯಾಗಿ ನಟಿ ಕಾಜಲ್ ಕುಂದರ್ ಕಾಣಿಸಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ : ಮೋದಿ-ನಿತೀಶ್ ಕುಮಾರ್ ಜೋಡಿಗೆ MGB ಧೂಳೀಫಟ.. 196 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿರುವ NDA ಮೈತ್ರಿಕೂಟ!

Btv Kannada
Author: Btv Kannada

Read More