ಬೆಂಗಳೂರು : ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳಿಗೆ ಐಷಾರಾಮಿ ರಾಜಾತಿಥ್ಯ, ಮೊಬೈಲ್ ಬಳಕೆ ಮತ್ತು ವೈರಲ್ ಆದ ಡ್ಯಾನ್ಸ್ ವಿಡಿಯೋಗಳು ತೀವ್ರ ವಿವಾದ ಸೃಷ್ಟಿಸಿದ್ದವು. ಇದೀಗ ವೈರಲ್ ಆದ ವಿಡಿಯೋದಲ್ಲಿದ್ದ ಬಂಧಿಗಳನ್ನ ಪರಪ್ಪನ ಅಗ್ರಹಾರ ಪೊಲೀಸರು ಆಂತರಿಕ ವಿಚಾರಣೆ ನಡೆಸಿ, ಹೇಳಿಕೆ ದಾಖಲು ಮಾಡಿದ್ದಾರೆ.
ಪೊಲೀಸರು ವಿಕೃತ ಕಾಮಿ ಉಮೇಶ್ ರೆಡ್ಡಿ, ಶಂಕಿತ ಉಗ್ರ ಜುಹಾದ್ ಹಮೀದ್ ಶಕೀಲ್, ತರುಣ್ ಕೊಂಡೊರು, ಚೋರ್ ಷಾಹೀದ್ ಹಾಗೂ ಕಾರ್ತಿಕ್ @ ಚಿಟ್ಟೆ ವಿಚಾರಣೆ ನಡೆಸಿದ್ದಾರೆ. ಕಿಲ್ಲರ್ ಉಮೇಶ್ ರೆಡ್ಡಿ ವಿಚಾರಣೆ ವೇಳೆ ಪೋನ್ನಲ್ಲಿ ಮಾತಾಡಿದ್ದ ಬಗ್ಗೆ ಬಾಯ್ಬಿಟ್ಟಿದ್ದು, ನಾನು ಯಾವ ಫೋನ್ ಕೂಡ ಯೂಸ್ ಮಾಡ್ತಿಲ್ಲ. ಬೇರೆ ಕೈದಿಗಳ ಬಳಿ ಮೊಬೈಲ್ ತೆಗೆದುಕೊಂಡು ತಾಯಿ ಜೊತೆ ಮಾತಾಡಿದ್ದೆ, ತಾಯಿ ಕ್ಯಾನ್ಸರ್ ರೋಗಿ ಇದ್ದಾರೆ ಹಾಗಾಗಿ ಅವರ ಜೊತೆ ಮಾತನಾಡಿದ್ದೆ. ಈ ವೇಳೆ ಯಾರೋ ಗೊತ್ತಿಲ್ಲದೆ ವಿಡಿಯೋ ಚಿತ್ರೀಕರಿಸಿದ್ದಾರೆ ಎಂದು ಉಮೇಶ್ ರೆಡ್ಡಿ ಹೇಳಿದ್ದಾನೆ. ಉಮೇಶ್ ರೆಡ್ಡಿ ತಾನು ಮಾತನಾಡಿದ್ದ ಕೊಠಡಿ ಸ್ಥಳ ತೋರಿಸಿದ್ದು, ಪ್ರಸ್ತುತ ಕೈದಿ ಉಮೇಶ್ ರೆಡ್ಡಿ ಆಸ್ಪತ್ರೆ ವಾರ್ಡ್ನಲ್ಲಿದ್ದಾನೆ.
ಶಂಕಿತ ಉಗ್ರ ಜುಹಾದ್ ಹಮೀದ್ ಶಕೀಲ್ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಎರಡು ವರ್ಷಗಳ ಹಿಂದೆ ಬಂಧಿಯೊಬ್ಬ ಮೊಬೈಲ್ ನೀಡಿದ್ದ, ಮೊಬೈಲ್ ಕೈಯಲ್ಲಿ ಹಿಡಿದಿದ್ದೆ ವಿನಾಃ ಪೋನ್ನಲ್ಲಿ ಮಾತನಾಡಿಲ್ಲ, ಪುನಃ ಮೊಬೈಲ್ ವಾಪಸ್ ಕೊಟ್ಟಿದ್ದೆ, ಮೊಬೈಲ್ ಕೊಟ್ಟವನು ಯಾರು ಅಂತಾ ನೆನಪಿಲ್ಲ ಅಂತಾ ಹೇಳಿದ್ದಾನೆ. ಬಳಿಕ ಅಧಿಕಾರಿಗಳು ವಿಡಿಯೋ ತೋರಿಸಿ ವಿಚಾರಣೆ ಮಾಡಿದ್ದು, ಆಗ ಈ ಹಿಂದೆ ಉದ್ದವಾದ ಕೂದಲು ಬಿಟ್ಟು, ಬೇರೆ ಕನ್ನಡಕ ಧರಿಸಿದ್ದೆ ಎಂದಿದ್ದಾನೆ ಶಂಕಿತ ಉಗ್ರ.
ಪೊಲೀಸರು ಸ್ಮಗ್ಲಿಂಗ್ ಕೇಸ್ ಆರೋಪಿ ತರುಣ್ ಕೊಂಡೂರು ರಾಜುನನ್ನು ವಿಚಾರಣೆ ನಡೆಸಿದ್ದಾರೆ. ತರುಣ್ ಕೊಂಡೂರು ಮೊಬೈಲ್ ಕೈಯಲ್ಲಿ ಹಿಡಿದು ಕುಳಿತಿದ್ದ, ಮೊಹಮ್ಮದ್ ಪಾಜೀಲ್ ಖಾನ್ ಎಂಬಾತ ಮೊಬೈಲ್ ಕೊಟ್ಟಿದ್ದ. ಸದ್ಯ ಮೊಹಮ್ಮದ್ ಪಾಜೀಲ್ ಖಾನ್ ಜೈಲಿನಿಂದ ಬಿಡುಗಡೆಯಾಗಿದ್ದು, ಕಳೆದೊಂದು ವಾರದ ಹಿಂದೆ ಎರಡು ಮೊಬೈಲ್ ಮಾರಾಟ ಮಾಡ್ತೀನಿ ಅಂತ ತಂದಿದ್ದ. ಸ್ಮಾರ್ಟ್ ಫೋನ್ಗೆ ಒಂದು ಲಕ್ಷ ಹಣ ಕೇಳಿದ್ದ, ಅಷ್ಟು ಆಗೋದಿಲ್ಲ ಐದು ಸಾವಿರ ಕೊಡ್ತೀನಿ ಅಂತ ಮೊಬೈಲ್ ನೋಡ್ತಿದ್ದೆ. ಅದನ್ನ ನೋಡಿ ಪುನಃ ವಾಪಸ್ ನೀಡುವಾಗ, ಬೇರೊಂದು ಮೊಬೈಲ್ನಲ್ಲಿ ವಿಡಿಯೋ ಮಾಡಿದ್ದ. ಬಳಿಕ ಆತ ನನಗೆ ಆಗಾಗ ಹಣ ನೀಡುವಂತೆ ಪೀಡಿಸುತ್ತಿದ್ದ ಎಂದಿದ್ದಾನೆ. ಈ ಬಗ್ಗೆ ಪೊಲೀಸರು ಹೇಳಿಕೆ ದಾಖಲು ಮಾಡಿಕೊಂಡಿದ್ದಾರೆ.
ವರಂಡಾದಲ್ಲಿ ಕುಳಿತಿದ್ದ ಷಾಹೀದ್ ಖಾನ್ ಅಲಿಯಾಸ್ ಚೋರ್ ಷಾಹೀದ್ನನ್ನು ವಿಚಾರಣೆ ನಡೆಸಿದ್ದು, ಈ ವೇಳೆ ನಾನು 3-4 ಬಾರಿ ಜೈಲಿಗೆ ಬಂದಿದ್ದೇನೆ, ಆದರೆ ಯಾವುದೇ ಉಗ್ರ ಸಂಘಟನೆಗೆ ಸೇರಿದವನಲ್ಲ. ಮಾದಕ ವಸ್ತು ಕೇಸಿನಲ್ಲಿ 2024 ರಲ್ಲಿ ಜೈಲಿಗೆ ಬಂದಿದ್ದೇನೆ, ಯಾವುದೇ ಮೊಬೈಲ್ ಫೋನ್ ಬಳಸಿಲ್ಲ, ಕುಳಿತಿರುವ ವಿಡಿಯೋ ಚಿತ್ರೀಕರಿಸಿ ಹರಿಬಿಟ್ಟಿದ್ದಾರೆ ಎಂದಿದ್ದಾನೆ. ಬಳಿಕ ಚೋರ್ ಷಾಹೀದ್ ವಿಡಿಯೋದಲ್ಲಿದ್ದ ಸ್ಥಳ ಗುರುತಿಸಿದ್ದಾನೆ.
ಬ್ಯಾರಕ್ನಲ್ಲಿ ಡ್ರಮ್ ಬಾರಿಸಿ ಡ್ಯಾನ್ಸ್ ಮಾಡಿರೋ ದೃಶ್ಯದಲ್ಲಿರೋದು ಮಂಜುನಾಥ್ @ ಕೋಳಿ ಮಂಜ, ಚರಣ್ ರಾವ್, ಧನಂಜಯ್, ಕಾರ್ತಿಕ್ @ ಚಿಟ್ಟೆ ಅನ್ನೋದು ತನಿಖೆಯಲ್ಲಿ ಗೊತ್ತಾಗಿದೆ. ಕೋಳಿ ಮಂಜ, ಚರಣ್ ರಾವ್ 2025ರ ಮಾರ್ಚ್ನಲ್ಲಿ ಬಿಡುಗಡೆಯಾಗಿದ್ದಾನೆ, ಧನಂಜಯ ವಿಡಿಯೋ ವೈರಲ್ ಆದ ಎರಡು ದಿನದ ಮುಂಚೆ ಅಂದ್ರೆ ನ. 7 ರಂದು ಬಿಡುಗಡೆಯಾಗಿದ್ದ, ಇನ್ನು ಕಾರ್ತಿಕ್ @ ಚಿಟ್ಟೆ ಇನ್ನು ಜೈಲಿನಲ್ಲಿದ್ದಾನೆ. ವೈರಲ್ ವಿಡಿಯೋ ಕಳೆದ ಆರು ತಿಂಗಳ ಹಿಂದೆ ಮಾಡಿರಬಹುದು ಎಂದು ಹೇಳಿದ್ದಾನೆ.
ಇದನ್ನೂ ಓದಿ : ಬಿಹಾರ ಎಲೆಕ್ಷನ್ ಮತ ಎಣಿಕೆ ಆರಂಭ – ಭರ್ಜರಿ ಮುನ್ನಡೆ ಸಾಧಿಸಿರುವ NDA ಮೈತ್ರಿಕೂಟ!







