ಬಾಗಲಕೋಟೆ : ಕಬ್ಬು ಬೆಳೆಗಾರರು ತಮ್ಮ ಬಾಕಿ ಹಣ ಮತ್ತು ಪ್ರಸಕ್ತ ಸಾಲಿನ ಕಬ್ಬಿನ ದರ ನಿಗದಿ ವಿಚಾರವಾಗಿ ನಡೆಸುತ್ತಿದ್ದ ಹೋರಾಟ ಬಾಗಲಕೋಟೆ ಜಿಲ್ಲೆಯಲ್ಲಿ ತೀವ್ರ ಸ್ವರೂಪ ಪಡೆದುಕೊಂಡಿದೆ. ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಮಹಾಲಿಂಗಪೂರ ಹೊರವಲಯದಲ್ಲಿ ನೂರಾರು ರೈತರು ಒಟ್ಟಾಗಿ, ಸಮೀರವಾಡಿ ಸಕ್ಕರೆ ಕಾರ್ಖಾನೆಯ ವಿರುದ್ಧ ತೀವ್ರ ಪ್ರತಿಭಟನೆ ನಡೆಸಿದ್ದಾರೆ.

ಆಕ್ರೋಶಿತ ರೈತರು ಕಬ್ಬು ತುಂಬಿಕೊಂಡು ಸಕ್ಕರೆ ಕಾರ್ಖಾನೆಯತ್ತ ಸಾಗುತ್ತಿದ್ದ ಟ್ರ್ಯಾಕ್ಟರ್ಗಳನ್ನು ತಡೆದು ನಿಲ್ಲಿಸಿದರು. ಈ ವೇಳೆ, ಒಂದು ಟ್ರ್ಯಾಕ್ಟರ್‌ನಲ್ಲಿದ್ದ ಲಕ್ಷಾಂತರ ಮೌಲ್ಯದ ಕಬ್ಬಿಗೆ ಬೆಂಕಿ ಹಚ್ಚಿ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ. ಈ ಘಟನೆಯಲ್ಲಿ ಕಬ್ಬು ಸಮೇತ ಟ್ರ್ಯಾಕ್ಟರ್‌ಗೂ ಹೆಚ್ಚು ಹಾನಿಯಾಗಿದೆ. ಇನ್ನುಳಿದ ಕಬ್ಬು ತುಂಬಿದ್ದ ಟ್ರ್ಯಾಕ್ಟರ್ ಟ್ರ್ಯಾಲಿಗಳನ್ನು ರೈತರು ರಸ್ತೆಯ ಪಕ್ಕಕ್ಕೆ ಉರುಳಿಸಿ ರಸ್ತೆ ತಡೆದು ಆಕ್ರೋಶ ವ್ಯಕ್ತಪಡಿಸಿದರು. ಕಾರ್ಖಾನೆಯವರು ಕಬ್ಬಿನ ಬಾಕಿ ಹಣ ಪಾವತಿ ಮಾಡದಿರುವುದು ಹಾಗೂ ಪ್ರಸಕ್ತ ಕಟಾವು ಅವಧಿಯ ಕಬ್ಬಿನ ದರವನ್ನು ಸೂಕ್ತವಾಗಿ ನಿಗದಿಪಡಿಸದಿರುವುದು ರೈತರ ಆಕ್ರೋಶಕ್ಕೆ ಮುಖ್ಯ ಕಾರಣವಾಗಿದೆ.

ಘಟನಾ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಪರಿಸ್ಥಿತಿ ನಿಯಂತ್ರಿಸಲು ಬಂದ ಪೊಲೀಸರು ಮತ್ತು ಕಬ್ಬು ಬೆಳೆಗಾರರ ನಡುವೆ ತೀವ್ರ ವಾಗ್ವಾದ ಕೂಡ ನಡೆದಿದೆ.
ಇದನ್ನೂ ಓದಿ : ಜಮೀನು ವಿಚಾರಕ್ಕೆ ದಾಯಾದಿಗಳ ಮಧ್ಯೆ ಗಲಾಟೆ – ಸಹೋದರಿಯರ ಮೇಲೆಯೇ ಅಣ್ಣಂದಿರಿಂದ ಮಾರಣಾಂತಿಕ ಹಲ್ಲೆ!







