ಬೆಂಗಳೂರು : ಧರ್ಮಸ್ಥಳದಲ್ಲಿ ನೂರಾರು ಮೃತದೇಹಗಳನ್ನು ಹೂತಿಟ್ಟಿದ್ದಾರೆ ಎನ್ನಲಾದ ಪ್ರಕರಣದ ಬಗ್ಗೆ ಎಸ್‌ಐಟಿ ನಡೆಸುತ್ತಿದ್ದ ತನಿಖೆಗೆ ನೀಡಿದ್ದ ಮಧ್ಯಂತರ ತಡೆಯಾಜ್ಞೆಯನ್ನು ಹೈಕೋರ್ಟ್ ತೆರವುಗೊಳಿಸಿದೆ.
ಈ ಆದೇಶದಿಂದ ಪ್ರಕರಣದಲ್ಲಿ ಎಸ್‌ಐಟಿ ತನಿಖೆ ಮುಂದುವರೆಯಲಿದ್ದು, ಪಿತೂರಿ ನಡೆಸಿದ ಆರೋಪ ಎದುರಿಸುತ್ತಿದ್ದ ವಿಠಲಗೌಡ, ಗಿರೀಶ್ ಮಟ್ಟಣ್ಣವರ್, ಮಹೇಶ್ ತಿಮರೋಡಿ ಮತ್ತು ಟಿ. ಜಯಂತ್ ಅವರು ಎಸ್‌ಐಟಿ ಮುಂದೆ ವಿಚಾರಣೆಗೆ ಹಾಜರಾಗಬೇಕಾಗಿದೆ.
ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ತಮ್ಮ ವಿರುದ್ಧ ದಾಖಲಿಸಿರುವ ಪ್ರಕರಣ (ಎಫ್‌ಐಆರ್39/2025) ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಬೆಳ್ತಂಗಡಿ ಪೊಲೀಸರು ಜಾರಿ ಮಾಡಿದ್ದ ನೋಟಿಸ್ ಪ್ರಶ್ನಿಸಿ, ಗಿರೀಶ್ ಮಟ್ಟಣ್ಣವರ್, ಮಹೇಶ್ ಶೆಟ್ಟಿ ತಿಮರೋಡಿ, ಟಿ. ಜಯಂತ್ ಮತ್ತು ವಿಠಲ್‌ಗೌಡ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಿ. ಎಂ. ನವಾಜ್ ಅವರಿದ್ದ ನ್ಯಾಯಪೀಠ ತಡೆಯಾಜ್ಞೆ ತೆರವುಗೊಳಿಸಿ ಆದೇಶಿಸಿದೆ.
ನ್ಯಾಯಮೂರ್ತಿ ಮೊಹಮ್ಮದ್ ನವಾಜ್ ಅವರ ಪೀಠ ತೀವ್ರವಾದ ವಿಚಾರಣೆ ಬಳಿಕ ಈ ತೀರ್ಪು ನೀಡಿದೆ. ಪೀಠವು ಎಸ್ಐಟಿ ತನಿಖೆಗೆ ಯಾರೂ ಹಸ್ತಕ್ಷೇಪ ಮಾಡುವ ಅಗತ್ಯ ಇಲ್ಲ. ಕಾನೂನಿನ ಅಡಿಯಲ್ಲಿ ತನಿಖೆ ಮುಂದುವರಿಯಬಹುದು. ಆದರೆ ತನಿಖೆಯ ವೇಳೆ ಅರ್ಜಿದಾರರಿಗೆ ಯಾವುದೇ ರೀತಿಯ ಕಿರುಕುಳ ನೀಡಬಾರದು ಎಂದು ನಿರ್ದೇಶನ ನೀಡಿದೆ.
ಈ ತೀರ್ಪಿನಿಂದ ಎಸ್ಐಟಿ ತನಿಖೆಗೆ ತಾತ್ಕಾಲಿಕವಾಗಿ ಬಂದಿದ್ದ ಅಡ್ಡಿ ದೂರವಾಗಿದೆ. ಈಗ ತನಿಖಾಧಿಕಾರಿಗಳು ಹೊಸ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ ಪ್ರಕರಣದ ನಿಜಾಂಶ ಪತ್ತೆಹಚ್ಚುವ ಕಾರ್ಯಾಚರಣೆಗೆ ತಯಾರಾಗಿದ್ದಾರೆ. ಮೂಲಗಳ ಪ್ರಕಾರ, ಎಸ್ಐಟಿ ಈಗಾಗಲೇ ಹಲವಾರು ಸಾಕ್ಷ್ಯಪತ್ರಗಳು, ದೂರವಾಣಿ ಸಂಭಾಷಣೆಗಳು ಹಾಗೂ ಬ್ಯಾಂಕ್ ಲೆಕ್ಕಾಚಾರಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಸಂಗ್ರಹಿಸಿದೆ.
ಇದನ್ನೂ ಓದಿ : ಸೆಟ್ಟೇರಿತು ಬಿಗ್ಬಾಸ್ ಮೋಕ್ಷಿತ ಪೈ ಅಭಿನಯದ ‘ರುಕ್ಮಿಣಿ ರಾಧಾಕೃಷ್ಣ’ ಸಿನಿಮಾ!







