ಬೆಂಗಳೂರು : ಸಾಲ ಮರುಪಾವತಿ ಮಾಡುವಂತೆ ಪತಿನಿತ್ಯ ಕಿರುಕುಳ ನೀಡಿ, ಇಡೀ ಕುಟುಂಬ ಆತ್ಮಹತ್ಯೆಗೆ ಯತ್ನಿಸುವಂತೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕ್ಕಜಾಲ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಮೋನಿಷಾ, ತ್ಯಾಗರಾಜ, ಕಿಶೋರ್ ಜೈನ್ ಮತ್ತು ಲೋಕೇಶ್ ಬಂಧಿತ ಆರೋಪಿಗಳು.

ಅಕ್ಟೋಬರ್ 30 ರಂದು ಈ ದುರ್ಘಟನೆ ನಡೆದಿತ್ತು. ಹೆಗ್ಗನಹಳ್ಳಿಯ ಮನೆಯಲ್ಲಿ ಕುಮಾರ್ ಮತ್ತು ಅವರ ಪತ್ನಿ ರಮಾ, ಮಕ್ಕಳಾದ ಅರುಣ್ ಹಾಗೂ ಅಕ್ಷಯ್ ಆತ್ಮಹತ್ಯೆಗೆ ಯತ್ನಿಸಿದ್ದರು. ಘಟನೆಯಲ್ಲಿ ಮಗ ಅರುಣ್ ನೇಣು ಹಾಕಿಕೊಂಡು ಸಾವನ್ನಪ್ಪಿದ್ದರೆ, ತಂದೆ ಕುಮಾರ್ ವಿಷ ಸೇವಿಸಿ ಕೊನೆಯುಸಿರೆಳೆದಿದ್ದರು. ಅದೃಷ್ಟವಶಾತ್, ವಿಷ ಸೇವಿಸಿದ್ದ ತಾಯಿ ರಮಾ ಮತ್ತು ಮಗ ಅಕ್ಷಯ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಆತ್ಮಹತ್ಯೆಗೆ ಶರಣಾದ ಕುಮಾರ್ ಅವರು ತಮ್ಮ ಸಾವಿಗೆ ಕೆಲ ವ್ಯಕ್ತಿಗಳ ಕಿರುಕುಳವೇ ಕಾರಣ ಎಂದು ಡೆತ್ ನೋಟ್‌ನಲ್ಲಿ ಉಲ್ಲೇಖಿಸಿದ್ದರು. ತನಿಖೆ ನಡೆಸಿದಾಗ, ಬಂಧಿತ ಆರೋಪಿಗಳು ಮೃತ ಅರುಣ್‌ಗೆ ಈ ಹಿಂದೆ ಸಾಲ ನೀಡಿದ್ದರು. ಪದೇ ಪದೇ ಸಾಲ ಮರುಪಾವತಿ ಮಾಡುವಂತೆ ಒತ್ತಡ ಹೇರಿ, ನಿತ್ಯ ಟಾರ್ಚರ್ ನೀಡುತ್ತಿದ್ದರು. ಈ ಕಿರುಕುಳದಿಂದ ಬೇಸತ್ತು ಇಡೀ ಕುಟುಂಬ ಆತ್ಮಹತ್ಯೆಗೆ ಯತ್ನಿಸಿತ್ತು.

ಮೃತರ ಡೆತ್ ನೋಟ್ ಆಧರಿಸಿ ಪೊಲೀಸರು ತನಿಖೆ ಕೈಗೊಂಡಿದ್ದರು. ಸದ್ಯ ನಾಲ್ವರು ಆರೋಪಿಗಳನ್ನು ಬಂಧಿಸಿದ್ದು, ಮತ್ತೊಬ್ಬ ಪ್ರಮುಖ ಆರೋಪಿ ಕಿಶೋರ್ ರೆಡ್ಡಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.


ಇದನ್ನೂ ಓದಿ : ಇತಿಹಾಸ ನಿರ್ಮಿಸಿದ ಬಿಡಿಎ – ಒಂದೇ ದಿನದಲ್ಲಿ 784 ಬದಲಿ ನಿವೇಶನ ಹಂಚಿಕೆ!







