ಬಾಲಿವುಡ್‌ನ ಹಿರಿಯ ನಟ ಧರ್ಮೇಂದ್ರ ಅವರು ನಿಧನರಾಗಿದ್ದಾರೆ ಎಂಬ ಸುಳ್ಳು ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು. ಆದರೆ ಇದೀಗ ಅವರು ಬದುಕಿದ್ದಾರೆ, ನಟ ಧರ್ಮೇಂದ್ರ ಅವರ ಆರೋಗ್ಯ ಸ್ಥಿರವಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಅವರ ಕುಟುಂಬಸ್ಥರು ಸ್ಪಷ್ಟಗೊಳಿಸಿದ್ದಾರೆ.
ಆರೋಗ್ಯದಲ್ಲಿ ಏರುಪೇರಾಗಿದ್ದರಿಂದ ನಟ ಧರ್ಮೇಂದ್ರ ಅವರು ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರು ವೈದ್ಯರ ನಿಗಾದಲ್ಲಿದ್ದು, ಆರೋಗ್ಯ ಸ್ಥಿರವಾಗಿದೆ, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಅವರ ಪುತ್ರಿ ಇಶಾ ಡಿಯೋಲ್ ಮತ್ತು ಪುತ್ರ ಸನ್ನಿ ಡಿಯೋಲ್ ಖಚಿತಪಡಿಸಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಧರ್ಮೇಂದ್ರ ಅವರ ನಿಧನದ ಸುದ್ದಿ ವೈರಲ್ ಆಗುತ್ತಿದ್ದಂತೆ, ಅವರ ಪುತ್ರಿ ಇಶಾ ಡಿಯೋಲ್ ಇನ್‌ಸ್ಟಾಗ್ರಾಮ್‌ನಲ್ಲಿ ಸ್ಪಷ್ಟನೆ ನೀಡಿದ್ದಾರೆ. ಮಾಧ್ಯಮಗಳು ಅತಿರೇಕದಿಂದ ವರ್ತಿಸುತ್ತಿವೆ ಮತ್ತು ಸುಳ್ಳು ಸುದ್ದಿಗಳನ್ನು ಹರಡುತ್ತಿವೆ. ನನ್ನ ತಂದೆಯ ಆರೋಗ್ಯ ಸ್ಥಿರವಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ. ನಮ್ಮ ಕುಟುಂಬಕ್ಕೆ ಖಾಸಗಿತನವನ್ನು ನೀಡುವಂತೆ ಎಲ್ಲರನ್ನೂ ವಿನಂತಿಸುತ್ತೇವೆ. ಅಪ್ಪನ ಶೀಘ್ರ ಚೇತರಿಕೆಗಾಗಿ ಪ್ರಾರ್ಥಿಸಿದ ಎಲ್ಲರಿಗೂ ಧನ್ಯವಾದಗಳು ಎಂದು ಅವರು ಬರೆದಿದ್ದಾರೆ.
ಪತ್ನಿ ಹೇಮಾ ಮಾಲಿನಿಯವರು ಟ್ವೀಟ್ ಮಾಡಿದ್ದು, ಸುಳ್ಳು ಸುದ್ದಿಯನ್ನು ಹರಡಬೇಡಿ, ಕುಟುಂಬಕ್ಕೆ ಗೌರವ ಕೊಡಿ, ಖಾಸಗಿತನವನ್ನು ಗೌರವಿಸಿ ಎಂದು ಮನವಿ ಮಾಡಿದ್ದಾರೆ.
ಧರ್ಮೇಂದ್ರ ಅವರ ಪುತ್ರ, ನಟ ಸನ್ನಿ ಡಿಯೋಲ್ ಅವರ ತಂಡವು ಈ ವದಂತಿಗಳನ್ನು ತಳ್ಳಿಹಾಕಿ, ಧರ್ಮೇಂದ್ರ ಅವರು ಸ್ಥಿರವಾಗಿದ್ದಾರೆ ಮತ್ತು ವೈದ್ಯರ ನಿಗಾದಲ್ಲಿದ್ದಾರೆ. ಹೆಚ್ಚಿನ ಮಾಹಿತಿ ಲಭ್ಯವಾದಾಗ ಹಂಚಿಕೊಳ್ಳಲಾಗುವುದು. ದಯವಿಟ್ಟು ಅವರ ಆರೋಗ್ಯದ ಬಗ್ಗೆ ಸುಳ್ಳು ವದಂತಿಗಳನ್ನು ಹರಡುವುದನ್ನು ನಿಲ್ಲಿಸಿ. ಎಲ್ಲರೂ ಅವರ ಶೀಘ್ರ ಗುಣಮುಖರಾಗಲು ಪ್ರಾರ್ಥಿಸಬೇಕು ಮತ್ತು ಕುಟುಂಬದ ಗೌಪ್ಯತೆಯನ್ನು ಗೌರವಿಸಬೇಕು ಎಂದು ಸ್ಪಷ್ಟಪಡಿಸಿದೆ.
ಇದನ್ನೂ ಓದಿ : ‘ಕಾಲಾಯ ತಸ್ಮೈ ನಮಃ’ – ತನಿಖೆ ಮುಗಿಸಿ ಹೊರಬಂದ ಬೆನ್ನಲ್ಲೇ ನಟ ಧನ್ವೀರ್ ಫೋಸ್ಟ್!







