ಚುನಾವಣಾ ಆಯೋಗಕ್ಕೆ ಆಸ್ತಿಗಳ ಸುಳ್ಳು ಪ್ರಮಾಣ ಪತ್ರ ಸಲ್ಲಿಕೆ – ಶಿವರಾಜ್ ತಂಗಡಗಿ ವಿರುದ್ಧ ದೂರು ದಾಖಲಿಸಲು ಅನುಮತಿ ಕೋರಿ ರಾಜ್ಯಪಾಲರಿಗೆ ದಿನೇಶ್ ಕಲ್ಲಹಳ್ಳಿ ಮನವಿ!

ಬೆಂಗಳೂರು : ಕರ್ನಾಟಕ ಹಿಂದುಳಿದ ವರ್ಗಗಳ ಅಭಿವೃದ್ಧಿ ಸಚಿವ ಶಿವರಾಜ್ ಎಸ್ ತಂಗಡಗಿ ವಿರುದ್ಧ ಖಾಸಗಿ ದೂರು ದಾಖಲಿಸಲು ಅನುಮತಿ ನೀಡುವಂತೆ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಅವರು ರಾಜ್ಯಪಾಲರಿಗೆ ಮನವಿ ಮಾಡಿದ್ದಾರೆ.

ಶಿವರಾಜ್ ಎಸ್. ತಂಗಡಗಿ ಅವರು ಚುನಾವಣಾ ಆಯೋಗಕ್ಕೆ ಸಲ್ಲಿಸಿದ ತಮ್ಮ ನಾಮಪತ್ರದ ಅಫಿಡವಿಟ್‌ನಲ್ಲಿ ಕೆಲವು ಆಸ್ತಿಗಳನ್ನು ಉದ್ದೇಶಪೂರ್ವಕವಾಗಿ ಬಹಿರಂಗಪಡಿಸದೆ, ಚುನಾವಣಾ ಆಯೋಗಕ್ಕೆ ಸುಳ್ಳು ಮಾಹಿತಿ ನೀಡಿ, ನಿಜವಾದ ಆಸ್ತಿ ವಿವರಗಳನ್ನು ಮರೆಮಾಚಿ, ತಪ್ಪು ಪ್ರಮಾಣ ಪತ್ರವನ್ನು ಚುನಾವಣಾಧಿಕಾರಿಗೆ ಸಲ್ಲಿಸಿದ್ದಾರೆ. ಹಾಗಾಗಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ತಂಗಡಗಿ ವಿರುದ್ಧ ಖಾಸಗಿ ದೂರು ದಾಖಲಿಸಿ, ಅಗತ್ಯವಾದ ಕಾನೂನು ಕ್ರಮ ಕೈಗೊಳ್ಳಬೇಕು. ಭ್ರಷ್ಟಾಚಾರ ತಡೆ ಕಾಯ್ದೆ, 1988 ಸೆಕ್ಷನ್ 17A ಮತ್ತು 19(1), ಹಾಗು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ, 2023ರ ಸೆಕ್ಷನ್ 218 ಅಡಿಯಲ್ಲಿ ಪೂರ್ವಾನುಮತಿ ನೀಡುವಂತೆ ದಿನೇಶ್ ಕಲ್ಲಹಳ್ಳಿ ಅವರು ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ.

ಪತ್ರದಲ್ಲಿ ಏನಿದೆ?

2023 ರಂದು ಕರ್ನಾಟಕ ವಿಧಾನಸಭಾ ಚುನಾವಣೆಯ ವೇಳೆ ಕನಕಗಿರಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿದ್ದ ಶಿವರಾಜ್ ಎಸ್. ತಂಗಡಗಿ ಅವರು ಚುನಾವಣಾ ಆಯೋಗಕ್ಕೆ ಸಲ್ಲಿಸಿದ ತಮ್ಮ ನಾಮಪತ್ರದ ಅಫಿಡವಿಟ್​ನಲ್ಲಿ ಪತ್ನಿಯ ಹೆಸರಿನಲ್ಲಿ ದಾಖಲಾಗಿರುವ ಆಸ್ತಿಗಳನ್ನು ಉದ್ದೇಶಪೂರ್ವಕವಾಗಿ ಬಹಿರಂಗಪಡಿಸದೆ, ಸುಳ್ಳು ಮತ್ತು ತಪ್ಪು ಮಾಹಿತಿ ನೀಡಿ ಚುನಾವಣಾ ಆಯೋಗವನ್ನು ದಾರಿ ತಪ್ಪಿಸಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಸಂಬಂಧಿತ ಪ್ರಮಾಣ ಪತ್ರವನ್ನು ನಾನು ಚುನಾವಣಾ ಆಯೋಗದ ಅಧಿಕೃತ ಅಂತರ್ಜಾಲ ತಾಣ ಮುಖಾಂತರ ಡೌನ್‌ಲೋಡ್ ಮಾಡಿಕೊಂಡು ಪರಿಶೀಲಿಸಿದಾಗ, ಅಲ್ಲಿ ಅನೇಕ ನ್ಯೂನತೆಗಳು ಹಾಗೂ ತಪ್ಪುಗಳು ಕಂಡುಬಂದಿವೆ. ಅಭ್ಯರ್ಥಿಯು ಉದ್ದೇಶಪೂರ್ವಕವಾಗಿ ತಾನು ಮತ್ತು ತನ್ನ ಕುಟುಂಬದ ಆಸ್ತಿಗಳ ನಿಜವಾದ ವಿವರಗಳನ್ನು ಮರೆಮಾಡಿರುವುದು ಕಂಡುಬರುತ್ತದೆ.

ಚುನಾವಣಾ ಪ್ರಕ್ರಿಯೆಯ ಪಾವಿತ್ರ್ಯವನ್ನು ಹಾಳುಮಾಡಿ, ಕನಕಗಿರಿ ಮತಕ್ಷೇತ್ರದ ಮತದಾರಿಗೆ ತಪ್ಪುಮಾಹಿತಿ ನೀಡಿ ವಂಚಿಸಿರುವುದು, ಮತದಾರರಿಗೆ ನಂಬಿಕೆ ಹುಟ್ಟಿಸುವಂತೆ ಸುಳ್ಳು ಘೋಷಣೆಗಳನ್ನು ಮಾಡಿದ್ದಾರೆ. ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾದ ಕೃತ್ಯವನ್ನು ಎಸಗಿರುವುದು ಸಾಬೀತಾಗಿದೆ. ಇದರಿಂದ ಅವರು ಕನಕಗಿರಿ ಕ್ಷೇತ್ರದ ಮತದಾರರನ್ನು ತಪ್ಪು ನಂಬಿಕೆಗೆ ಒಳಪಡಿಸಿ. ಅಸತ್ಯ ಮಾಹಿತಿಯ ಆಧಾರದ ಮೇಲೆ ಚುನಾವಣೆಯಲ್ಲಿ ಜಯಗಳಿಸಿ ಶಾಸಕರಾಗಿ, ಪ್ರಸ್ತುತ ಕರ್ನಾಟಕ ಸರ್ಕಾರದಲ್ಲಿ ಸಚಿವರ ಹುದ್ದೆ ವಹಿಸಿಕೊಂಡಿದ್ದಾರೆ. ಈ ಕೃತ್ಯವು ಚುನಾವಣೆ ಪ್ರಕ್ರಿಯೆಯ ಪವಿತ್ರತೆಯ ಉಲ್ಲಂಘನೆ ಆಗಿದ್ದು, ಇದು ಗಂಭೀರ ಅಪರಾಧ ಆಗಿದೆ.

ಈ ಕೃತ್ಯವು ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 318(2) ಅಡಿಯಲ್ಲಿ ತಪ್ಪು ದಾಖಲೆ ಅಥವಾ ಪ್ರಮಾಣ ಪತ್ರವನ್ನು ಸೃಷ್ಟಿಸುವುದು ಮತ್ತು ಸಾರ್ವಜನಿಕ ಅಧಿಕಾರಿಗೆ ಸಲ್ಲಿಸುವುದು ಎಂಬ ಅಪರಾಧಕ್ಕೆ ಸರಿಹೊಂದುತ್ತದೆ. ಈ ಸುಳ್ಳು ಅಫಿಡವಿಟ್ ಸಲ್ಲಿಸುವ ಮೂಲಕ Representation of the People Act, 1951 ರ ಸೆಕ್ಷನ್ 125A ಅಡಿಯಲ್ಲಿ ‘ತಪ್ಪು ಘೋಷಣೆ ಅಥವಾ ಸುಳ್ಳು ಪ್ರಮಾಣ ಪತ್ರ ನೀಡುವ ಅಪರಾಧಕ್ಕೂ ಪಾತ್ರರಾಗಿದ್ದಾರೆ. ಹೀಗಾಗಿ, ಮೇಲ್ಕಂಡ ಕೃತ್ಯಗಳ ಹಿನ್ನೆಲೆಯಲ್ಲಿ ಶಿವರಾಜ್ ಎಸ್. ತಂಗಡಗಿ ಅವರ ವಿರುದ್ಧ ಕಾನೂನುಬದ್ಧ ತನಿಖೆ ಪ್ರಾರಂಭಿಸಿ, ಅವರ ವಿರುದ್ಧ ಕ್ರಿಮಿನಲ್ ಪ್ರೊಸೀಡಿಂಗ್ಸ್ ಜರುಗಿಸುವುದು ಅತ್ಯವಶ್ಯಕವಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಅವರು ರಾಜ್ಯಪಾಲರಿಗೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ : ಪತಿಯನ್ನು ಕೊಂದು ಆತ್ಮಹತ್ಯೆ ನಾಟಕವಾಡಿದ ಪತ್ನಿ ಲಾಕ್!

Btv Kannada
Author: Btv Kannada

Read More