ಪತಿಯನ್ನು ಕೊಂದು ಆತ್ಮಹತ್ಯೆ ನಾಟಕವಾಡಿದ ಪತ್ನಿ ಲಾಕ್!

ಮೈಸೂರು : ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಪತಿಯನ್ನು ಕೊಲೆ ಮಾಡಿ, ಅದನ್ನು ಆತ್ಮಹತ್ಯೆ ಎಂದು ಬಿಂಬಿಸಲು ಯತ್ನಿಸಿದ ಘಟನೆ ಮೈಸೂರಿನ ನಂಜನಗೂಡು ತಾಲ್ಲೂಕಿನ ಇಂದಿರಾ ಗ್ರಾಮದಲ್ಲಿ ನಡೆದಿದೆ. 41 ವರ್ಷದ ಪತಿ ವೀರಣ್ಣ ಕೊಲೆ ಮಾಡಿದ 35 ವರ್ಷದ ಪತ್ನಿ ಶಿವಮ್ಮಳನ್ನು ಹುಲ್ಲಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬಲರಾಮ ಎಂಬಾತನ ಜೊತೆ ಕಳೆದ 4 ವರ್ಷಗಳಿಂದ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಳು. ವೀರಣ್ಣ ತನ್ನ ಪತ್ನಿಯ ಅಕ್ರಮ ಸಂಬಂಧವನ್ನು ತೀವ್ರವಾಗಿ ವಿರೋಧಿಸುತ್ತಿದ್ದರು. ಈ ಕುರಿತು ಗ್ರಾಮದಲ್ಲಿ ನ್ಯಾಯ ಪಂಚಾಯ್ತಿ ಕೂಡ ನಡೆದಿತ್ತು. ಪಂಚಾಯ್ತಿಯಲ್ಲಿ ಬಲರಾಮನ ಸಂಪರ್ಕವನ್ನು ಬಿಡುವಂತೆ ಶಿವಮ್ಮಳಿಗೆ ಬುದ್ಧಿ ಹೇಳಲಾಗಿತ್ತು. ರಾತ್ರಿ ಬಲರಾಮ ಶಿವಮ್ಮಳಿಗೆ ಮತ್ತೆ ಫೋನ್ ಮಾಡಿದ ಹಿನ್ನೆಲೆಯಲ್ಲಿ ದಂಪತಿಗಳ ನಡುವೆ ತೀವ್ರ ಗಲಾಟೆ ನಡೆದಿದೆ. ಕೆಲವೇ ಗಂಟೆಗಳ ನಂತರ ವೀರಣ್ಣ ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದಾರೆ.

ವೀರಣ್ಣ ಸಾವಿನ ನಂತರ, ಪತ್ನಿ ಶಿವಮ್ಮ ಮೃತದೇಹವನ್ನು ನೇಣಿನ ಕುಣಿಕೆಗೆ ಹಾಕಿ, ತನ್ನ ಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೈಡ್ರಾಮಾ ಸೃಷ್ಟಿಸಿದ್ದಳು. ಸ್ಥಳೀಯರಿಗೆ ಹಾಗೂ ಪೊಲೀಸರಿಗೆ ಆತ್ಮಹತ್ಯೆಯೆಂದು ಬಿಂಬಿಸಲು ಆಕೆ ನಾಟಕವಾಡಿದ್ದಳು.

ಪ್ರಕರಣದ ಕುರಿತು ಅನುಮಾನಗೊಂಡ ಹುಲ್ಲಹಳ್ಳಿ ಠಾಣೆ ಪೊಲೀಸರು ಶಿವಮ್ಮಳನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೊಳಪಡಿಸಿದಾಗ ಪತಿ ಕೊಲೆ ರಹಸ್ಯ ಬಯಲಾಗಿದೆ. ಅಕ್ರಮ ಸಂಬಂಧಕ್ಕೆ ಅಡ್ಡಿಯಾದ್ದಕ್ಕೆ ಪತಿಯನ್ನೇ ಕೊಲೆ ಮಾಡಿರುವ ಕೃತ್ಯವನ್ನು ಶಿವಮ್ಮ ಒಪ್ಪಿಕೊಂಡಿದ್ದಾಳೆ. ಊರಿಗೆ ನ್ಯಾಯ ಹೇಳ್ತಿದ್ದ, ಸಮಾಜದಲ್ಲಿ ಗೌರವಯುತವಾಗಿ ಬದುಕುತ್ತಿದ್ದ ವೀರಣ್ಣ, ಕೊನೆಗೆ ತನ್ನದೇ ಪತ್ನಿಯ ಅಕ್ರಮ ಸಂಚಿಗೆ ಬಲಿಯಾಗಿದ್ದಾನೆ. ಸದ್ಯ ಹುಲ್ಲಹಳ್ಳಿ ಠಾಣೆ ಪೊಲೀಸರಿಂದ ಹೆಚ್ಚಿನ ವಿಚಾರಣೆ ಮುಂದುವರಿದಿದೆ.

ಇದನ್ನೂ ಓದಿ : ಸಿಂಪಲ್ ಸುನಿ ‘ಗತವೈಭವ’ಕ್ಕೆ ಕಿಚ್ಚ ಸುದೀಪ್ ಸಾಥ್ – ನ.14ಕ್ಕೆ ಸಿನಿಮಾ ರಿಲೀಸ್!

Btv Kannada
Author: Btv Kannada

Read More