ಸಿಮೆಂಟ್ ಮಿಕ್ಸರ್ ಲಾರಿ ಹರಿದು ಪುಟ್ಟ ಮಗು ಸಾವು – ಮನೆ ಕಾಂಪೌಂಡ್ನಲ್ಲಿ ಆಡ್ತಿದ್ದ ಪ್ರಣವ್ ದುರಂತ ಅಂತ್ಯ!

ಬೆಂಗಳೂರು : ಸಿಮೆಂಟ್ ಮಿಕ್ಸರ್ ಲಾರಿಯೊಂದು ಮಾಡಿದ ಭೀಕರ ಅವಾಂತರದಿಂದಾಗಿ ಮನೆಯ ಗೋಡೆ ಕುಸಿದು ಆಟವಾಡುತ್ತಿದ್ದ ಒಂದು ವರ್ಷ ಎಂಟು ತಿಂಗಳ ಪುಟ್ಟ ಬಾಲಕ ಪ್ರಣವ್  ಸಾವಿಗೀಡಾಗಿದ್ದಾನೆ. ಬೆಂಗಳೂರಿನ ಕುಂದಲಹಳ್ಳಿ ಕಾಲೋನಿಯಲ್ಲಿ ನವೆಂಬರ್ 7 ರಂದು ಮಧ್ಯಾಹ್ನ 3:11 ರ ಸುಮಾರಿಗೆ ಈ ಹೃದಯ ವಿದ್ರಾವಕ ಘಟನೆ ಸಂಭವಿಸಿದೆ.

ಹೊಸ ಮನೆಯೊಂದರ ಮೋಲ್ಡಿಂಗ್ ಕೆಲಸ ಮುಗಿಸಿ ವಾಪಸ್ ಬರುತ್ತಿದ್ದ ಸಿಮೆಂಟ್ ಮಿಕ್ಸರ್ ಲಾರಿ, ರಸ್ತೆಯ ಮೇಲೆ ಹಾದುಹೋಗಿದ್ದ ವಿದ್ಯುತ್ ವೈರಿಂಗ್ ತಂತಿಗೆ ತಾಗಿದೆ. ತಂತಿಯು ಲಾರಿಗೆ ಸಿಲುಕಿ ವೈರಿಂಗ್ ಕಂಬವನ್ನು ಎಳೆದು ಬಂದಿದೆ. ಕಂಬ ಕಿತ್ತು ಬಂದ ರಭಸಕ್ಕೆ ಸಮೀಪದಲ್ಲಿದ್ದ ಮನೆಯ ಗೋಡೆಯು ಕುಸಿದಿದೆ. ಈ ದುರಂತ ಸಂಭವಿಸಿದಾಗ, ಮನೆಯ ಕಾಂಪೌಂಡ್‌ನಲ್ಲಿ ಆಟವಾಡುತ್ತಿದ್ದ ಪುಟ್ಟ ಮಗು ಪ್ರಣವ್ ಮೇಲೆ ಗೋಡೆಯ ಅವಶೇಷಗಳು ಬಿದ್ದಿವೆ. ಗಂಭೀರವಾಗಿ ಗಾಯಗೊಂಡಿದ್ದ ಬಾಲಕ ಪ್ರಣವ್‌ನನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಮಾರ್ಗ ಮಧ್ಯೆಯೇ ಆತ ಕೊನೆಯುಸಿರೆಳೆದಿದ್ದಾನೆ.

ಘಟನೆ ನಡೆಯುತ್ತಿದ್ದಂತೆಯೇ ಕಾಂಕ್ರೀಟ್ ಮಿಕ್ಸರ್ ಲಾರಿಯ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಈ ಘಟನೆಗೆ ಸಂಬಂಧಿಸಿದಂತೆ ಮಗುವಿನ ಕುಟುಂಬಸ್ಥರು ಹೆಚ್ಎಎಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪರಾರಿಯಾಗಿರುವ ಚಾಲಕನ ಬಂಧನಕ್ಕಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಇದನ್ನೂ ಓದಿ : ವೃದ್ಧ ನಾಗರಾಜಯ್ಯ ನಿಗೂಢ ಸಾವು ಪ್ರಕರಣಕ್ಕೆ ಟ್ವಿಸ್ಟ್ – ಯುಡಿಆರ್ ಕೇಸ್ ಕೊಲೆ ಪ್ರಕರಣವಾಗಿ ಬದಲಾವಣೆ!

Btv Kannada
Author: Btv Kannada

Read More