ಬೆಂಗಳೂರು : ಉಪಮುಖ್ಯಮಂತ್ರಿ (ಡಿಸಿಎಂ) ಡಿ.ಕೆ. ಶಿವಕುಮಾರ್ ಅವರ ಘನತೆ ಮತ್ತು ಪ್ರತಿಷ್ಠೆಗೆ ಧಕ್ಕೆ ತಂದಿರುವ ಆರೋಪದ ಮೇಲೆ, (AI) ತಂತ್ರಜ್ಞಾನವನ್ನು ಬಳಸಿ ಅವಹೇಳನಕಾರಿ ವಿಡಿಯೋ ಹಂಚಿಕೊಂಡಿದ್ದ ಇನ್‌ಸ್ಟಾಗ್ರಾಂ ಖಾತೆದಾರರ ವಿರುದ್ಧ (FIR) ದಾಖಲಾಗಿದೆ.

ಕನ್ನಡ ಚಿತ್ರರಂಗ ಎಂಬ ಹೆಸರಿನ ಇನ್‌ಸ್ಟಾಗ್ರಾಂ ಖಾತೆಯ ಮೂಲಕ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಈ ವಿಡಿಯೋದಲ್ಲಿ, AI ತಂತ್ರಜ್ಞಾನವನ್ನು ದುರ್ಬಳಕೆ ಮಾಡಿಕೊಂಡು, ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ತಳ್ಳಿ ಕೆಳಕ್ಕೆ ಬೀಳಿಸುವ ದೃಶ್ಯವನ್ನು ಸೃಷ್ಟಿಸಲಾಗಿತ್ತು. ಒಂದು ಮಾಧ್ಯಮ ಚಾನೆಲ್‌ನ ಹೆಸರನ್ನು ಬಳಸಿಕೊಂಡು ಈ ಸುಳ್ಳು ಸುದ್ದಿಯನ್ನು ಬಿತ್ತರಿಸಲಾಗಿತ್ತು, ಜೊತೆಗೆ, “ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಹೀಗೆ ಮಾಡಬಾರದಿತ್ತು” ಎಂಬ ಸಂದೇಶವನ್ನು ಕೂಡ ವಿಡಿಯೋದಲ್ಲಿ ಸೇರಿಸಲಾಗಿತ್ತು.

ಈ ವಿಡಿಯೋವನ್ನು ಗಮನಿಸಿದ ವಕೀಲ ದೀಪು ಅವರು, ಸದಾಶಿವನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಕೆಲವು ಕಿಡಿಗೇಡಿಗಳು AI ತಂತ್ರಜ್ಞಾನದ ಮೂಲಕ ಒಂದು ಚಾನೆಲ್‌ನ ಹೆಸರನ್ನು ಬಳಸಿಕೊಂಡು ಸಮಾಜಕ್ಕೆ ತಪ್ಪು ಸಂದೇಶ ರವಾನೆ ಮಾಡಿದ್ದಾರೆ. ಸಮಾಜದಲ್ಲಿ ಅಶಾಂತಿ ಮತ್ತು ಗೊಂದಲವನ್ನು ಸೃಷ್ಟಿಸುವ ದುರುದ್ದೇಶದಿಂದ ಈ ಕೃತ್ಯ ಎಸಗಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ವಕೀಲ ದೀಪು ಅವರ ದೂರಿನ ಆಧಾರದ ಮೇಲೆ ಎಫ್‌ಐಆರ್ ದಾಖಲಿಸಿಕೊಂಡಿರುವ ಸದಾಶಿವನಗರ ಪೊಲೀಸರು, ಇದೀಗ ವಿಡಿಯೋ ಲೀಕ್ ಮಾಡಿದ ‘ಕನ್ನಡ ಚಿತ್ರರಂಗ’ ಇನ್‌ಸ್ಟಾಗ್ರಾಂ ಖಾತೆಯ ಅಡ್ಮಿನ್‌ನ ಪತ್ತೆಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.
ಇದನ್ನೂ ಓದಿ : ಮಾಗಡಿ ಶಾಸಕ ಬಾಲಕೃಷ್ಣ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ – ಗ್ರೇಟರ್ ಬೆಂಗಳೂರು ಟೌನ್‌ಶಿಪ್ ವಿರೋಧಿಸಿ ಮಹಿಳೆಯರ ಘೇರಾವ್!







