ಮಾಗಡಿ ಶಾಸಕ ಬಾಲಕೃಷ್ಣ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ – ಗ್ರೇಟರ್ ಬೆಂಗಳೂರು ಟೌನ್‌ಶಿಪ್ ವಿರೋಧಿಸಿ ಮಹಿಳೆಯರ ಘೇರಾವ್!

ರಾಮನಗರ : ಉತ್ತರ ಕರ್ನಾಟಕ ಬಳಕ ದಕ್ಷಿಣ ಕರ್ನಾಟಕದಲ್ಲ್ಲೂ ರೈತರ ಮಹಾ ಕಿಚ್ಚು ಭುಗಿಲೆದ್ದಿದೆ. ಮಾಗಡಿ ಕಾಂಗ್ರೆಸ್​ ಶಾಸಕ ಹೆಚ್.ಸಿ. ಬಾಲಕೃಷ್ಣ ವಿರುದ್ಧ ರೈತ ಸಮುದಾಯ ಭುಗಿಲೆದ್ದಿದೆ. ಬಿಡದಿ ಬಳಿ ಪ್ರಸ್ತಾಪಿತವಾಗಿರುವ ಗ್ರೇಟರ್ ಬೆಂಗಳೂರು ಇಂಟಿಗ್ರೇಟೆಡ್ ಟೌನ್‌ಶಿಪ್ ಯೋಜನೆ ವಿರೋಧಿಸಿ ರಾಮನಗರ (ಬೆಂಗಳೂರು ದಕ್ಷಿಣ ಜಿಲ್ಲೆ) ತಾಲೂಕಿನಲ್ಲಿ ರೈತ ಸಮುದಾಯದ ಆಕ್ರೋಶ ತಾರಕಕ್ಕೇರಿದೆ. ಯೋಜನೆಯ ಕುರಿತು ವಿರೋಧ ವ್ಯಕ್ತಪಡಿಸಿರುವ ರೈತರು, ತಮ್ಮ ಪ್ರದೇಶದ ಕಾಂಗ್ರೆಸ್ ಶಾಸಕರೂ ಆದ ಮಾಗಡಿ ಶಾಸಕ ಹೆಚ್.ಸಿ. ಬಾಲಕೃಷ್ಣ ಅವರಿಗೆ ಘೇರಾವ್ ಹಾಕಿ ಛೀಮಾರಿ ಹಾಕಿದ್ದಾರೆ.

ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರ ತಾಲೂಕಿನ ಅರಳಾಳುಸಂದ್ರ ಗ್ರಾಮದ ಬಳಿ. ಬಿಡದಿ ಬಳಿ ಸಾವಿರಾರು ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಲಿರುವ ಗ್ರೇಟರ್ ಬೆಂಗಳೂರು ಟೌನ್‌ಶಿಪ್ (GBIT) ಯೋಜನೆಗೆ ಭೂಸ್ವಾಧೀನ ಪ್ರಕ್ರಿಯೆ ನಡೆಯುತ್ತಿರುವುದಕ್ಕೆ ರೈತರ ತೀವ್ರ ವಿರೋಧ.  ಗ್ರಾಮದಲ್ಲಿ ಪಕ್ಷದ ಕಾರ್ಯಕರ್ತರೊಬ್ಬರ ಗೃಹಪ್ರವೇಶ ಕಾರ್ಯಕ್ರಮಕ್ಕೆ ಬಂದಿದ್ದ ಶಾಸಕ ಹೆಚ್‌.ಸಿ ಬಾಲಕೃಷ್ಣ ಅವರ ಕಾರನ್ನು ರೈತ ಸಮುದಾಯದ, ಮುಖ್ಯವಾಗಿ ರೈತ ಮಹಿಳೆಯರು ಅಡ್ಡಗಟ್ಟಿ ತಮ್ಮ ರೋಷಾವೇಷವನ್ನು ವ್ಯಕ್ತಪಡಿಸಿದರು. ರೈತರ ಆಕ್ರೋಶದಿಂದ ಶಾಸಕ ಹೆಚ್‌.ಸಿ ಬಾಲಕೃಷ್ಣ ಅವರ ಕಾರಿನ ಮುಂಭಾಗಕ್ಕೆ ಸಣ್ಣಪುಟ್ಟ ಹಾನಿ ಉಂಟಾಗಿದೆ. ಆಕ್ರೋಶಿತ ರೈತರು ಶಾಸಕರಿಗೆ ಛೀಮಾರಿ ಹಾಕಿ ಗ್ರಾಮದಿಂದಲೇ ಓಡಿಸಿದ್ದಾರೆ.

ಈ ಬೃಹತ್ ಟೌನ್‌ಶಿಪ್ ಯೋಜನೆಗೆ ತಮ್ಮ ಫಲವತ್ತಾದ ಭೂಮಿಯನ್ನು ಕಳೆದುಕೊಳ್ಳುವ ಭೀತಿಯಲ್ಲಿರುವ ರೈತರು, ಗ್ರೇಟರ್ ಬೆಂಗಳೂರು ಇಂಟಿಗ್ರೇಟೆಡ್ ಟೌನ್‌ಶಿಪ್ ಯೋಜನೆಯನ್ನು ಸಂಪೂರ್ಣವಾಗಿ ವಿರೋಧಿಸುತ್ತಿದ್ದಾರೆ. ಈ ಹಿಂದೆ ಉತ್ತರ ಕರ್ನಾಟಕದಲ್ಲಿ ಕಾಣಿಸಿಕೊಂಡ ರೈತರ ಪ್ರತಿಭಟನೆಗಳ ನಂತರ, ಇದೀಗ ದಕ್ಷಿಣ ಕರ್ನಾಟಕದಲ್ಲೂ ರೈತರ ಪ್ರತಿಭಟನೆಯ ಕಿಚ್ಚು ಕಾಣಿಸಿಕೊಂಡಿದೆ. ಈ ಘಟನೆಯು ಆಡಳಿತಾರೂಢ ಪಕ್ಷದ ಶಾಸಕರ ವಿರುದ್ಧವೇ ಸ್ಥಳೀಯ ರೈತರು ಸಿಡಿದೆದ್ದಿರುವುದನ್ನು ತೋರಿಸುತ್ತದೆ.

ಗ್ರೇಟರ್ ಬೆಂಗಳೂರು ಟೌನ್‌ಶಿಪ್ ಯೋಜನೆ ಕುರಿತಂತೆ ಸರ್ಕಾರ ಮತ್ತು ರೈತರ ನಡುವಿನ ಸಂಘರ್ಷ ತೀವ್ರಗೊಳ್ಳುವ ಸಾಧ್ಯತೆ ಇದೆ. ಈ ಪ್ರತಿಭಟನೆಗಳು ರಾಜಕೀಯ ಸ್ವರೂಪವನ್ನು ಪಡೆಯುವ ಲಕ್ಷಣಗಳಿದ್ದು, ವಿರೋಧ ಪಕ್ಷಗಳು ಈಗಾಗಲೇ ರೈತರ ಬೆಂಬಲಕ್ಕೆ ನಿಂತಿವೆ. ಈ ಯೋಜನೆ ಕುರಿತು ಸರ್ಕಾರ ಮುಂದಿನ ಯಾವ ಕ್ರಮಗಳನ್ನು ಕೈಗೊಳ್ಳಲಿದೆ ಎಂಬುದರ ಮೇಲೆ ಮುಂದಿನ ಪರಿಸ್ಥಿತಿ ನಿರ್ಧಾರವಾಗಲಿದೆ.

ಇದನ್ನೂ ಓದಿ : ಬೆಂಗಳೂರಿನ RTO ಕಚೇರಿಗಳ ಮೇಲೆ ಲೋಕಾಯುಕ್ತ ಮೆಗಾ ರೇಡ್​ – ನ್ಯಾ. ಬಿ.ಎಸ್ ಪಾಟೀಲ್ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ‘ಕರ್ಮಕಾಂಡ’ ಬಯಲು!!

Btv Kannada
Author: Btv Kannada

Read More