ಬೆಂಗಳೂರಿನ RTO ಕಚೇರಿಗಳ ಮೇಲೆ ಲೋಕಾಯುಕ್ತ ಮೆಗಾ ರೇಡ್​ – ನ್ಯಾ. ಬಿ.ಎಸ್ ಪಾಟೀಲ್ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ‘ಕರ್ಮಕಾಂಡ’ ಬಯಲು!!

ಬೆಂಗಳೂರು : ಸಾರ್ವಜನಿಕರಿಂದ ಬಂದ ದೂರುಗಳ ಹಿನ್ನೆಲೆಯಲ್ಲಿ, ಲೋಕಾಯುಕ್ತ ಅಧಿಕಾರಿಗಳು ನಿನ್ನೆ ಬೆಂಗಳೂರಿನ ಪ್ರಾದೇಶಿಕ ಸಾರಿಗೆ ಕಚೇರಿಗಳ (RTO) ಮೇಲೆ ಸರ್ಚ್ ವಾರಂಟ್ ಪಡೆದು ದಿಢೀರ್ ದಾಳಿ ನಡೆಸಿ, ಸಮಗ್ರ ಅಕ್ರಮಗಳ ಜಾಲವನ್ನು ಬಯಲಿಗೆಳೆದಿದ್ದಾರೆ. ಈ ದಾಳಿಯಲ್ಲಿ ಆರು RTO ಕಚೇರಿಗಳಲ್ಲಿ ಕಂಡುಬಂದ ಪ್ರಮುಖ ಲೋಪದೋಷಗಳ ವಿವರ ಇಲ್ಲಿದೆ.

1. ಯಶವಂತಪುರ RTO, ಬೆಂಗಳೂರು: ಏಜೆಂಟರ ಹಾವಳಿ ಮತ್ತು ಕರ್ತವ್ಯ ಲೋಪ

RTO ಕಚೇರಿಯ ಸುತ್ತಮುತ್ತಲಿದ್ದ 32 ಸ್ಟೇಷನರಿ ಮತ್ತು ಜೆರಾಕ್ಸ್ ಅಂಗಡಿಗಳು ದಾಳಿ ಆರಂಭವಾಗುತ್ತಿದ್ದಂತೆ ಮುಚ್ಚಲ್ಪಟ್ಟವು. ಇವು RTO ಸಿಬ್ಬಂದಿಯ ಮಧ್ಯವರ್ತಿಗಳಾಗಿ ಕಾರ್ಯನಿರ್ವಹಿಸುತ್ತಿದ್ದವು. ಲೋಕಾಯುಕ್ತ ಅಧಿಕಾರಿಗಳನ್ನು ಕಂಡು ಓಡಿಹೋಗುತ್ತಿದ್ದ ದಲ್ಲಾಳಿಗಳ ಜೇಬಿನಿಂದ ₹ 14,000 ನಗದು ಜಪ್ತಿ ಮಾಡಲಾಗಿದೆ. 32 RTO ನೌಕರರಲ್ಲಿ ಕೇವಲ 7 ಮಂದಿ ಮಾತ್ರ ಹಾಜರಾತಿ ಪುಸ್ತಕದಲ್ಲಿ ಸಹಿ ಹಾಕಿರುವುದು ಪತ್ತೆಯಾಗಿದೆ. ಶಶಿಕುಮಾರ್ ಎಂಬ ಸಿಬ್ಬಂದಿ ಕೆಲಸಕ್ಕೆ ಹಾಜರಾಗದೆ ವಸೂಲಿ ಕೆಲಸದಲ್ಲಿ ತೊಡಗಿದ್ದರು. ಡಿಎಲ್ (DL) ವಿತರಿಸಲು ಒದಗಿಸಲಾದ 16 ಅರ್ಜಿಗಳನ್ನು RTO ಇನ್ಸ್‌ಪೆಕ್ಟರ್ ಹಣಕ್ಕಾಗಿ ತಡೆಹಿಡಿದಿದ್ದರು.

2. ರಾಜಾಜಿನಗರ RTO: DL, RC ಕಾರ್ಡ್‌ಗಳು ಮುದ್ರಣವಿಲ್ಲದೆ ಬಾಕಿ

ಬರೋಬ್ಬರಿ 3,800 ಚಾಲನಾ ಪರವಾನಗಿ (DL) ಮತ್ತು 6,300 ನೋಂದಣಿ ಪ್ರಮಾಣ ಪತ್ರಗಳು (RC ಕಾರ್ಡ್) ಮುದ್ರಣವಿಲ್ಲದೆ ಉಳಿದುಕೊಂಡಿವೆ. ಇದಕ್ಕೆ ಕಾರಣ ಕೇಳಿದಾಗ, RTO ಅಧಿಕಾರಿಗಳು ಗುತ್ತಿಗೆ ಕಂಪೆನಿ ‘ರೋಸ್ ಮಾರ್ಟ್’ ಮೇಲೆ ಗೂಬೆ ಕೂರಿಸಲು ಪ್ರಯತ್ನಿಸಿದ್ದಾರೆ. ಇಲ್ಲಿನ ಸ್ಟೇಷನರಿ ಮತ್ತು ಜೆರಾಕ್ಸ್ ಅಂಗಡಿಗಳ ಬ್ರೋಕರ್‌ಗಳು ದಾಳಿಗೆ ಹೆದರಿ ಅಂಗಡಿಯ ಶಟರ್‌ಗಳನ್ನು ಎಳೆದಿದ್ದರು.

3. ಜಯನಗರ RTO: ದಾಖಲೆಗಳ ನಿರ್ವಹಣೆಯಲ್ಲಿ ಅಕ್ರಮ

ನಗದು ಘೋಷಣೆ, ಚಲನವಲನ ಮತ್ತು ಹಾಜರಾತಿ ಪುಸ್ತಕಗಳನ್ನು ಸರಿಯಾಗಿ ನಿರ್ವಹಿಸಿಲ್ಲ. ನಗದು ಮತ್ತು ಚಲನ್ ಗಳ ಹಣ ಹೊಂದಿಕೆಯಾಗಿದ್ದರೂ, ವೈಯಕ್ತಿಕ ಹಣದ ಬಗ್ಗೆ ಯಾವುದೇ ಸಿಬ್ಬಂದಿ ಲೆಕ್ಕಾಚಾರ ನೀಡಿಲ್ಲ.1,300 RC ಕಾರ್ಡ್‌ಗಳನ್ನು ಸಾರ್ವಜನಿಕರಿಗೆ ಪೋಸ್ಟ್ ಮೂಲಕ ಸಮರ್ಪಕವಾಗಿ ಕಳುಹಿಸದೆ ಕಚೇರಿಯಲ್ಲೇ ರಾಶಿ ಹಾಕಲಾಗಿದೆ. ನಾಲ್ಕು ತಿಂಗಳಿನಿಂದ RC ಕಾರ್ಡ್‌ಗಾಗಿ ಅಲೆದಾಡುತ್ತಿರುವ ಸಾರ್ವಜನಿಕರು ತಮ್ಮ ನೋವನ್ನು ತೋಡಿಕೊಂಡಿದ್ದಾರೆ.

4. ಯಲಹಂಕ RTO: ನಗದು ಘೋಷಣೆ ಮತ್ತು ಫಿಟ್‌ನೆಸ್ ಪ್ರಮಾಣಪತ್ರದಲ್ಲಿ ಅಕ್ರಮ

RTO ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗುವಾಗ ತಮ್ಮ ಬಳಿಯ ಹಣದ ಮೊತ್ತವನ್ನು ತಿಳಿಸಿರುತ್ತಾರೆ, ಆದರೆ ಕರ್ತವ್ಯ ಮುಗಿದು ಹೊರಹೋಗುವಾಗ ಹಣದ ವಿವರಣೆ ನೀಡದೆ ತೆರಳಿರುತ್ತಾರೆ. ತೆರಿಗೆ ಕಟ್ಟದ 1,200 ವಾಹನ ಮಾಲೀಕರಿಂದ ಜಪ್ತಿ ಅಥವಾ ದಂಡ, ಯಾವುದನ್ನೂ ವಸೂಲಿ ಮಾಡಿಲ್ಲ. ಫಿಟ್‌ನೆಸ್ ಸರ್ಟಿಫಿಕೇಟ್ ಇಲ್ಲದ ಸುಮಾರು 60-70 ವಾಹನಗಳು ಆರಾಮಾಗಿ ಓಡಾಡುತ್ತಿರುವುದು ವಿಚಾರಣೆ ವೇಳೆ ತಿಳಿದುಬಂದಿದೆ.

5. ಕಸ್ತೂರಿನಗರ RTO: ಖಾಸಗಿ ಅಂಗಡಿಯಲ್ಲಿ ಸರ್ಕಾರಿ ದಾಖಲೆಗಳು!

RTO ಪಕ್ಕದಲ್ಲೇ ಇರುವ ರಜನೀಕಾಂತ್ ಎಂಬವರಿಗೆ ಸೇರಿದ ‘ಮಾರುತಿ ಮೋಟಾರ್ಸ್’ ಅಂಗಡಿಯಲ್ಲಿ 49 RC ಕಾರ್ಡ್‌ಗಳು ಮತ್ತು 83 DL ಗಳು ಪತ್ತೆಯಾಗಿವೆ. ಆ ಕಾರ್ಡ್‌ಗಳ ಮೇಲೆ ₹ 1,500, ₹ 2,000 ಹೀಗೆ ಹತ್ತಾರು ರೇಟ್‌ಗಳನ್ನು ಬರೆಯಲಾಗಿದೆ. RTO ಒಳಗೆ ಇರಬೇಕಾದ ಸರ್ಕಾರಿ ದಾಖಲೆಗಳು ಖಾಸಗಿ ವ್ಯಕ್ತಿಯ ಕೈಯಲ್ಲಿ ಹೇಗೆ ಸಿಕ್ಕವು ಎಂಬುದಕ್ಕೆ RTO ಅಧಿಕಾರಿಗಳು ಸಮರ್ಪಕ ಉತ್ತರ ನೀಡಿಲ್ಲ. ಸೀಜ್ ಆಗಿದ್ದ ನೇಪಾಳದ 7 ವಾಹನಗಳ ಬಗ್ಗೆ ಯಾವುದೇ ವಿವರಣೆ ಕೊಡದೆ RTO ಸಿಬ್ಬಂದಿ ನಾಟಕವಾಡಿದ್ದಾರೆ.

6. ಕೆ.ಆರ್ ಪುರಂ RTO: ಫಿಟ್‌ನೆಸ್ ಪ್ರಮಾಣಪತ್ರಗಳ ಭಾರೀ ಲೋಪ

ಕಚೇರಿ ವ್ಯಾಪ್ತಿಯಲ್ಲಿ ನೋಂದಣಿಯಾಗಿರುವ ಒಟ್ಟು 7,51,755 ವಾಹನಗಳಲ್ಲಿ 1,52,503 ವಾಹನಗಳಿಗೆ ಫಿಟ್‌ನೆಸ್ ಸರ್ಟಿಫಿಕೇಟ್ ಇರುವುದಿಲ್ಲ. ಫಿಟ್‌ನೆಸ್ ಅವಧಿ ಮುಗಿದಿರುವ ವಾಹನಗಳಿಗೆ ನೀಡಲಾದ ನೋಟಿಸ್‌ನಲ್ಲಿ ಸಹಿ, ಮೊಹರು, ವಿಳಾಸ ಯಾವುದೂ ಸರಿಯಾಗಿರುವುದಿಲ್ಲ.  ಯಾವುದೇ ಮಾಹಿತಿ ನೀಡದೆ 4 RTO ಸಿಬ್ಬಂದಿ ಕೆಲಸಕ್ಕೆ ಹಾಜರಾಗದೇ ಗೈರಾಗಿರುವುದು ಕಂಡುಬಂದಿದೆ.

ಲೋಕಾಯುಕ್ತರ ಈ ದಾಳಿಯು ಬೆಂಗಳೂರಿನ RTO ಕಚೇರಿಗಳಲ್ಲಿ ಬೇರೂರಿರುವ ಭ್ರಷ್ಟಾಚಾರ, ಏಜೆಂಟರ ಹಾವಳಿ ಮತ್ತು ಕರ್ತವ್ಯಲೋಪವನ್ನು ಸ್ಪಷ್ಟವಾಗಿ ಸಾಬೀತುಪಡಿಸಿದೆ. ಈ ಹಿಟ್ ಲಿಸ್ಟ್ ಅಂಶಗಳ ಆಧಾರದ ಮೇಲೆ ಲೋಕಾಯುಕ್ತರು ಮುಂದಿನ ಕಾನೂನು ಕ್ರಮ ಜರುಗಿಸಲಿದ್ದಾರೆ.

ಇದನ್ನೂ ಓದಿ : ಬಿಜೆಪಿ ಮುಖಂಡನ ಪುತ್ರನ ವಿರುದ್ಧ ಪೋಕ್ಸೊ ಪ್ರಕರಣ – ಇಬ್ಬರು ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ ಯತ್ನ ಆರೋಪ!

Btv Kannada
Author: Btv Kannada

Read More