ಉತ್ತರ ಕರ್ನಾಟಕದಲ್ಲಿ ಕಬ್ಬು ಬೆಳೆಗಾರರ ಆಕ್ರೋಶ ಸ್ಫೋಟ – ಹೈವೇಗಳು ಬಂದ್.. ಥಂಡಾ ಹೊಡೆದ ಸರ್ಕಾರ!

ಬೆಳಗಾವಿ : ಉತ್ತರ ಕರ್ನಾಟಕದಲ್ಲಿ ಕಬ್ಬು ಬೆಳೆಗಾರರ ಪ್ರತಿಭಟನೆ ಆಕ್ರೋಶ ತೀವ್ರಗೊಂಡಿದೆ. ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಸಾವಿರಾರು ರೈತರು ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳನ್ನು ತಡೆದು ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿದ್ದಾರೆ.

ರೈತರು ಪ್ರತಿ ಟನ್ ಕಬ್ಬಿಗೆ ಕನಿಷ್ಠ ₹3,500 ದರ ನಿಗದಿ ಮಾಡುವಂತೆ ತೀವ್ರವಾಗಿ ಆಗ್ರಹಿಸುತ್ತಿದ್ದಾರೆ. ಸಕ್ಕರೆ ಕಾರ್ಖಾನೆಗಳು ನೀಡುತ್ತಿರುವ ದರಕ್ಕೆ ತಮ್ಮ ಒಪ್ಪಿಗೆ ಇಲ್ಲ ಎಂದು ಹೇಳಿದ್ದಾರೆ. ಪ್ರತಿಭಟನಾನಿರತ ಕಬ್ಬು ಬೆಳೆಗಾರರು ರಾಜ್ಯ ಸರ್ಕಾರಕ್ಕೆ ಸಂಜೆ 7 ಗಂಟೆಯೊಳಗೆ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಅಥವಾ ಸೂಕ್ತ ನಿರ್ಧಾರ ನೀಡಿವಂತೆ ಡೆಡ್‌ಲೈನ್ ಕೊಟ್ಟಿದ್ದಾರೆ. ಒಂದು ವೇಳೆ ಸರ್ಕಾರವು ಈ ಸಮಯದೊಳಗೆ ತಮ್ಮ ಬೇಡಿಕೆಗಳನ್ನು ಈಡೇರಿಸಲು ವಿಫಲವಾದರೆ, ರಾಜ್ಯಾದ್ಯಂತ ಎಲ್ಲ ಪ್ರಮುಖ ಹೆದ್ದಾರಿಗಳನ್ನು ತಡೆದು ಬೃಹತ್ ಬಂದ್ ನಡೆಸುವುದಾಗಿ ರೈತರು ಎಚ್ಚರಿಕೆ ನೀಡಿದ್ದಾರೆ.

ಈಗಾಗಲೇ ಬೆಳಗಾವಿ-ಪುಣೆ ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಹಲವು ರಸ್ತೆಗಳನ್ನು ತಡೆದು ರೈತರು ಪ್ರತಿಭಟನೆ ನಡೆಸುತ್ತಿದ್ದು, ವಾಹನ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗಿದೆ. ಪ್ರತಿಭಟನೆಯು ದೀರ್ಘಕಾಲದವರೆಗೆ ಮುಂದುವರೆದಿದ್ದು, ರೈತರು ಹೆದ್ದಾರಿಗಳಲ್ಲೇ ಅಡುಗೆ ಮಾಡಿ ಊಟ ತಯಾರಿಸಿ ಬೀಡು ಬಿಟ್ಟಿದ್ದಾರೆ. ಈ ತೀವ್ರ ಆಕ್ರೋಶಕ್ಕೆ ರಾಜ್ಯ ಸರ್ಕಾರ ಥಂಡಾ ಹೊಡೆದಿದೆ.

ಬೆಳಗಾವಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಬಂದ್ :

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹತ್ತರಗಿ ಟೋಲ್ ಬಳಿ ರೈತರು ರಾಷ್ಟ್ರೀಯ ಹೆದ್ದಾರಿಯನ್ನು ಸಂಪೂರ್ಣ ಬಂದ್ ಮಾಡಿದ್ದಾರೆ. 3 ಸಾವಿರಕ್ಕೂ ಹೆಚ್ಚು ರೈತರು ಸ್ಥಳದಲ್ಲಿ ಜಮಾವಣೆಗೊಂಡಿದ್ದು, ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ರೈತರು ಪ್ರತಿಭಟನಾ ಸ್ಥಳವನ್ನು ತಾತ್ಕಾಲಿಕ ನಿವಾಸವನ್ನಾಗಿ ಮಾಡಿಕೊಂಡಿದ್ದಾರೆ. ಅಹೋರಾತ್ರಿ ಧರಣಿಗಾಗಿ ಅಕ್ಕಿ, ತರಕಾರಿ, ಎಣ್ಣೆ ಸೇರಿ ಅಗತ್ಯ ದಿನಸಿ ವಸ್ತುಗಳನ್ನು ಸಂಗ್ರಹಿಸಿಕೊಂಡು ಬಂದಿದ್ದಾರೆ. ಹೆದ್ದಾರಿ ಪಕ್ಕದಲ್ಲೇ ಅಡುಗೆ ಮಾಡಿ ಊಟ ತಯಾರಿಸಿ ಸಾಮೂಹಿಕವಾಗಿ ಸೇವಿಸುತ್ತಿದ್ದಾರೆ.  ಧರಣಿ ಸ್ಥಳದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಲು ಹೆಚ್ಚಿನ ಸಂಖ್ಯೆಯ ಪೊಲೀಸರನ್ನು ನಿಯೋಜಿಸಲಾಗಿದೆ. ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.

ಕಬ್ಬು ಬೆಳೆಗಾರರು ನಡೆಸುತ್ತಿರುವ ಹೋರಾಟ ತೀವ್ರ ಸ್ವರೂಪ ಪಡೆಯುತ್ತಿದ್ದು, ಈ ಹೋರಾಟಕ್ಕೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದ ವ್ಯಾಪಾರಸ್ಥರು ಮತ್ತು ಇತರ ಸಂಘಟನೆಗಳು ಸಾಥ್ ನೀಡಿದ್ದಾರೆ. ರೈತರ ಬೇಡಿಕೆಗಳನ್ನು ಬೆಂಬಲಿಸಿ ಚಿಕ್ಕೋಡಿ ಪಟ್ಟಣವನ್ನು ಸಂಪೂರ್ಣ ಬಂದ್ ಮಾಡಿ ಪ್ರತಿಭಟನೆಗೆ ಬೆಂಬಲ ಸೂಚಿಸಲಾಗಿದೆ. ಪ್ರತಿ ಟನ್ ಕಬ್ಬಿಗೆ ₹3,500 ದರ ನಿಗದಿ ಮಾಡುವಂತೆ ಕಬ್ಬು ಬೆಳೆಗಾರರು ನಡೆಸುತ್ತಿರುವ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸುವುದು. ಚಿಕ್ಕೋಡಿ ಪಟ್ಟಣದ ವ್ಯಾಪಾರಸ್ಥರು ಸ್ವಯಂಪ್ರೇರಿತರಾಗಿ ತಮ್ಮ ಅಂಗಡಿ-ಮುಂಗಟ್ಟುಗಳನ್ನು ಬಂದ್ ಮಾಡಿ ರೈತರ ಹೋರಾಟಕ್ಕೆ ಸಹಮತ ವ್ಯಕ್ತಪಡಿಸಿದ್ದಾರೆ. ಕೇವಲ ವ್ಯಾಪಾರಸ್ಥರಷ್ಟೇ ಅಲ್ಲದೆ, ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಕಾರ್ಯಕರ್ತರೂ ಸಹ ರೈತರ ಹೋರಾಟಕ್ಕೆ ಕೈ ಜೋಡಿಸಿದ್ದು, ಪ್ರತಿಭಟನೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ.

 

ಬೆಳಗಾವಿ TO ರಾಯಚೂರು ಹೆದ್ಧಾರಿ ತಡೆ :

ಕಬ್ಬಿನ ನ್ಯಾಯಯುತ ಬೆಲೆಗಾಗಿ ನಡೆಯುತ್ತಿರುವ ರೈತರ ಪ್ರತಿಭಟನೆ ಇದೀಗ ಬಾಗಲಕೋಟೆ ಜಿಲ್ಲೆಯಲ್ಲೂ ತೀವ್ರಗೊಂಡಿದೆ. ಬಾಗಲಕೋಟೆ ಜಿಲ್ಲೆಯ ಕಮತಗಿ ಕ್ರಾಸ್​ನಲ್ಲಿ ಕಬ್ಬು ಬೆಳೆಗಾರರು ಬೆಳಗಾವಿ TO ರಾಯಚೂರು ಸಂಚಾರದ ಪ್ರಮುಖ ರಾಷ್ಟ್ರೀಯ ಹೆದ್ದಾರಿಯನ್ನು ತಡೆದು ಪ್ರತಿಭಟನೆ ನಡೆಸುತ್ತಿದ್ದಾರೆ. ಹೆದ್ದಾರಿ ಬಂದ್‌ನಿಂದಾಗಿ ಅಮೀನಗಢ ಪಟ್ಟಣದ ಬಳಿ ಕಿಲೋಮೀಟರ್‌ಗಟ್ಟಲೆ ವಾಹನಗಳು ಸಾಲುಗಟ್ಟಿ ನಿಂತಿವೆ. KSRTC ಬಸ್ಸುಗಳು, ಖಾಸಗಿ ಬಸ್ಸುಗಳು, ಲಾರಿಗಳು, ಮತ್ತು ಕಾರುಗಳು ರಸ್ತೆಯಲ್ಲೇ ನಿಂತಿದ್ದು, ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ವಾಹನಗಳು ನಿಂತಲ್ಲೇ ನಿಂತಿರುವುದರಿಂದ, ಗಮ್ಯಸ್ಥಾನಕ್ಕೆ ತಲುಪಲು ಸಾಧ್ಯವಾಗದೆ ಪ್ರಯಾಣಿಕರು ತೀವ್ರ ಪರದಾಟ ನಡೆಸುತ್ತಿದ್ದಾರೆ.

 

ಇದನ್ನೂ ಓದಿ : “ಉಡಾಳ” ಚಿತ್ರದ ಟ್ರೇಲರ್ ಬಿಡುಗಡೆ : ನಿಶ್ವಿಕಾ ನಾಯ್ಡು-ನವೀನ್ ಶಂಕರ್ ಸಾಥ್!

Btv Kannada
Author: Btv Kannada

Read More