ಶಿಗ್ಗಾವಿ‌ಯಲ್ಲಿ ಮೀಟರ್ ಬಡ್ಡಿ ದಂಧೆಕೋರನ ಕಿರುಕುಳ – ಬಾಕಿ ವಸೂಲಿ ಹೆಸರಲ್ಲಿ ಮಹಿಳೆಯ ಮನೆ ಜಪ್ತಿ!

ಹಾವೇರಿ : ಹಾವೇರಿ ಜಿಲ್ಲೆಯ ಶಿಗ್ಗಾವಿಯಲ್ಲಿ ಮೀಟರ್ ಬಡ್ಡಿ ದಂಧೆಕೋರನ ಕಿರುಕುಳಕ್ಕೆ ಸಿಲುಕಿದ ವಿಧವೆ ಮಹಿಳೆಯೊಬ್ಬರು ಮತ್ತು ಆಕೆಯ ತಾಯಿ ಬೀದಿ ಪಾಲಾಗಿದ್ದಾರೆ. ಕೇವಲ ₹2 ಲಕ್ಷ ಸಾಲಕ್ಕೆ ಬಡ್ಡಿ ಸೇರಿ ಒಟ್ಟು ₹25 ಲಕ್ಷ ಹಣವನ್ನು ಪಾವತಿಸುವಂತೆ ದಂಧೆಕೋರ ದುರಗಪ್ಪ, ಹಣ ವಸೂಲಿಗಾಗಿ ಮಹಿಳೆಯ ಮನೆಯನ್ನೇ ಜಪ್ತಿ ಮಾಡಿರುವುದು ಬೆಳಕಿಗೆ ಬಂದಿದೆ.

ಶಿಗ್ಗಾವಿಯ ನಿವಾಸಿ ಲಕ್ಷ್ಮೀ ಎಂಬ ಮಹಿಳೆ 2024ರ ಮಾರ್ಚ್ ತಿಂಗಳಲ್ಲಿ ದುರಗಪ್ಪ ಎಂಬಾತನ ಬಳಿ ₹2 ಲಕ್ಷ ಸಾಲ ಪಡೆದಿದ್ದರು. ದುರಗಪ್ಪ ವಾರದ ಬಡ್ಡಿಯ ಲೆಕ್ಕದಲ್ಲಿ ಪ್ರತಿ ₹10 ಸಾವಿರಕ್ಕೆ ₹1 ಸಾವಿರ ಹಾಗೂ ₹1 ಲಕ್ಷಕ್ಕೆ ₹10 ಸಾವಿರದಂತೆ ಭಾರೀ ಪ್ರಮಾಣದ ಮೀಟರ್ ಬಡ್ಡಿ ವಿಧಿಸುತ್ತಿದ್ದ. ಬಾಕಿ ಹಣ ಪಾವತಿಸಲು ತಡವಾದ ಹಿನ್ನೆಲೆಯಲ್ಲಿ, ದುರಗಪ್ಪ ಬಡ್ಡಿಯ ಮೇಲೆ ಬಡ್ಡಿ ಹಾಕಿ ಇದೀಗ ₹25 ಲಕ್ಷಕ್ಕೆ ಬೇಡಿಕೆಯಿಟ್ಟಿದ್ದಾನೆ. ಆಘಾತಕಾರಿ ಸಂಗತಿಯೆಂದರೆ, ಬ್ಯಾಂಕ್‌ಗಳು ಮಾಡುವ ಮಾದರಿಯಂತೆ ಆತ ಲಕ್ಷ್ಮೀಯವರ ಮನೆ ಬಾಗಿಲಿಗೆ ವಸೂಲಿ ನೋಟಿಸ್ ಅಂಟಿಸಿ ದರ್ಪ ತೋರಿದ್ದಾನೆ.

₹2 ಲಕ್ಷ ಸಾಲಕ್ಕಾಗಿ ದುರಗಪ್ಪ ಪ್ರತ್ಯೇಕವಾಗಿ ₹9.5 ಲಕ್ಷ ರೂ.ಯಂತೆ ಎರಡು ಬಾಂಡ್‌ಗಳನ್ನು ಲಕ್ಷ್ಮೀಯವರಿಂದ ಬಲವಂತವಾಗಿ ಬರೆಸಿಕೊಂಡಿದ್ದಾನೆ. ಈ ಬಾಂಡ್‌ಗಳನ್ನು ಆಧಾರವಾಗಿಟ್ಟುಕೊಂಡು, ಆತ ಒಟ್ಟು ₹25 ಲಕ್ಷ ರೂ. ಬಾಕಿ ಪಾವತಿಸುವಂತೆ ಒತ್ತಡ ಹೇರಿ, ಮನೆಯನ್ನು ಜಪ್ತಿ ಮಾಡಿದ್ದಾನೆ. ದುರಗಪ್ಪನ ಕಿರುಕುಳದಿಂದಾಗಿ ಸದ್ಯ ಲಕ್ಷ್ಮೀ ಮತ್ತು ಆಕೆಯ ವೃದ್ಧ ತಾಯಿ ವಾಸಕ್ಕೆ ಮನೆಯಿಲ್ಲದೆ ಬೀದಿ ಪಾಲಾಗಿದ್ದಾರೆ. ಮಗಳ ಈ ಪರಿಸ್ಥಿತಿ ಕಂಡು ಲಕ್ಷ್ಮೀಯ ತಾಯಿ ಕಣ್ಣೀರು ಹಾಕುತ್ತಿದ್ದಾರೆ.

ಈ ಅನ್ಯಾಯದ ವಿರುದ್ಧ ದೂರು ನೀಡಲು ಲಕ್ಷ್ಮೀ ಮತ್ತು ಆಕೆಯ ತಾಯಿ ಸತತ ಐದು ದಿನಗಳಿಂದ ಶಿಗ್ಗಾವಿ ಪೊಲೀಸ್ ಠಾಣೆಗೆ ಅಲೆದಾಡುತ್ತಿದ್ದರೂ, ಪೊಲೀಸರು ದೂರು ಸ್ವೀಕರಿಸುತ್ತಿಲ್ಲ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಕುಟುಂಬವು ಶಿಗ್ಗಾವಿ ಠಾಣೆ ಪೊಲೀಸರ ವರ್ತನೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

ಇದನ್ನೂ ಓದಿ : ಸ್ಟಾರ್ ಕ್ರಿಕೆಟರ್‌ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ ಅನುಷ್ಕಾ ಶೆಟ್ಟಿ? ಆ ಖ್ಯಾತ ಆಟಗಾರ ಯಾರು?

Btv Kannada
Author: Btv Kannada

Read More