ಬೆಂಗಳೂರು : ಒನ್ ಸೈಡ್ ಲವ್ ಪ್ರಿಯಕರನನ್ನು ಒಲಿಸಿಕೊಳ್ಳಲು ಸಾಫ್ಟ್‌ವೇರ್ ಇಂಜಿನಿಯರ್ ಯುವತಿಯೊಬ್ಬಳು ಗೇಟ್ ಕೋಡ್ ಎಂಬ ಅಪ್ಲಿಕೇಷನ್ ಬಳಸಿ ದೇಶದ ಹಲವು ಶಾಲೆಗಳಿಗೆ ಬಾಂಬ್ ಬೆದರಿಕೆ ಇ-ಮೇಲ್‌ಗಳನ್ನು ರವಾನಿಸಿ ಕೊನೆಗೆ ಪೊಲೀಸರ ಬಲೆಗೆ ಬಿದ್ದಿದ್ದಾಳೆ. ಒನ್ ಸೈಡ್ ಲವ್ ವಿಫಲವಾದಾಗ ಯುವತಿಯೊಬ್ಬಳು ಹತಾಶೆಯಿಂದ ಮಾಡಿದ ಭೀಕರ ಕೃತ್ಯವೊಂದು ದೇಶಾದ್ಯಂತ ಶಾಲೆಗಳಲ್ಲಿ ಆತಂಕ ಮೂಡಿಸಿದೆ.

ರೆನಿ ಜೊಸಿಲ್ದಾ ಚೆನ್ನೈನ ಡಿಲೈಟ್ ಸಾಫ್ಟ್‌ವೇರ್ ಕಂಪನಿಯಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಳು. ಇದೇ ಕಂಪನಿಯ ಸಹೋದ್ಯೋಗಿ ದಿವೀಚ್ ಪ್ರಭಾಕರ್ ಎಂಬಾತನನ್ನು ಇವಳು ಮನಸಾರೆ ಪ್ರೀತಿಸುತ್ತಿದ್ದಳು. ಆದರೆ, ದಿವೀಚ್ ಪ್ರಭಾಕರ್ ಇವಳ ಪ್ರೀತಿಯನ್ನು ನಿರಾಕರಿಸಿ, ಬೇರೊಬ್ಬ ಯುವತಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದ.
ತನ್ನ ಪ್ರೀತಿ ನಿರಾಕರಿಸಿದ್ದಕ್ಕೆ ಮತ್ತು ದಿವೀಚ್‌ಗೆ ಎಂಗೇಜ್‌ಮೆಂಟ್ ಆಗಿದ್ದರಿಂದ, ರೆನಿ ವಿರಹವೇದನೆಯಲ್ಲಿದ್ದಳು. ದಿವೀಚ್‌ನನ್ನು ಹೇಗಾದರೂ ಮಾಡಿ ಪಡೆಯಬೇಕು ಅಥವಾ ಆತನಿಗೆ ಶಿಕ್ಷೆ ನೀಡಬೇಕು ಎಂಬ ದುರುದ್ದೇಶದಿಂದ ಆನ್‌ಲೈನ್‌ನಲ್ಲಿ ಓರ್ವ ಜ್ಯೋತಿಷಿಯನ್ನು ಸಂಪರ್ಕಿಸಿದ್ದಳು. ಜ್ಯೋತಿಷಿ ನೀಡಿದ ಮನೆಹಾಳು ಐಡಿಯಾದಂತೆ, ದಿವೀಚ್ ಪ್ರಭಾಕರ್ ಹೆಸರಿನಲ್ಲಿ ನಕಲಿ ಇ-ಮೇಲ್ ಖಾತೆ ಸೃಷ್ಟಿಸಿ, ಗೇಟ್ ಕೋಡ್ ಅಪ್ಲಿಕೇಷನ್ ಬಳಸಿ ಭಾರತದಲ್ಲಿರುವ ಎಲ್ಲ ಶಾಲೆಗಳ ಇ-ಮೇಲ್‌ಗಳಿಗೆ ಸರಣಿಯಾಗಿ ಬಾಂಬ್ ಸಂದೇಶ ಕಳಿಸಿದ್ದಳು. ಬೆಂಗಳೂರು, ಮೈಸೂರು ಸೇರಿದಂತೆ ಉತ್ತರ ಭಾರತದ ಅನೇಕ ಶಾಲೆಗಳಿಗೆ ಬಾಂಬ್ ಬೆದರಿಕೆ ಸಂದೇಶಗಳು ರವಾನೆಯಾಗಿ, ಪೋಷಕರು ಮತ್ತು ಶಾಲಾ ಆಡಳಿತದಲ್ಲಿ ತೀವ್ರ ಆತಂಕ ಸೃಷ್ಟಿಯಾಗಿತ್ತು.

ಗುಜರಾತ್‌ನಲ್ಲಿನ ಶಾಲೆಗಳಿಗೂ ಇದೇ ರೀತಿ ಬೆದರಿಕೆ ಇ-ಮೇಲ್ ಬಂದ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ಕೈಗೊಂಡಿದ್ದರು. ಕೊನೆಗೆ ತಂತ್ರಜ್ಞಾನದ ಸಹಾಯದಿಂದ ಇ-ಮೇಲ್ ಕಳುಹಿಸಿದ ಮೂಲವನ್ನು ಪತ್ತೆಹಚ್ಚಿದ ಗುಜರಾತ್ ಪೊಲೀಸರು, ಭಗ್ನಪ್ರೇಮಿ ರೆನಿ ಜೊಸಿಲ್ದಾಳನ್ನು ಬಂಧಿಸಿದ್ದಾರೆ. ಬಳಿಕ ಬಾಡಿ ವಾರೆಂಟ್ ಮೂಲಕ ಆಕೆಯನ್ನು ಬೆಂಗಳೂರು ಉತ್ತರ ಸೆನ್ ಪೊಲೀಸರ ವಶಕ್ಕೆ ನೀಡಲಾಗಿದೆ. ಒನ್ ಸೈಡ್ ಲವ್ ಪ್ರೀತಿಯ ಹುಚ್ಚಿನಿಂದ ತಾನೇ ತೋಡಿದ ಹಳ್ಳಕ್ಕೆ ಬಿದ್ದಿರುವ ರೆನಿ ಜೊಸಿಲ್ದಾ ಈಗ ಜೈಲಿನಲ್ಲಿ ಮುದ್ದೆ ಮುರಿಯುತ್ತಿದ್ದಾಳೆ.
ಇದನ್ನೂ ಓದಿ : ಬೆಂಗಳೂರಲ್ಲಿ ಕೊಳೆತ ಚಿಕನ್ ದಂಧೆ – ಜನರ ಜೀವದ ಜೊತೆ ಚೆಲ್ಲಾಟವಾಡ್ತಿರುವ ‘MY Chicken & More’ ಶಾಪ್!







