ಬೆಂಗಳೂರು : ಸರ್ಕಾರಿ ಜಾಗಗಳಲ್ಲಿ RSS ಚಟುವಟಿಕೆಗಳಿಗೆ ನಿಷೇಧ ಹೇರಲು ಸರ್ಕಾರ ಹೊರಡಿಸಿತ್ತು. ಈ ಅಧಿಸೂಚನೆಗೆ ಹೈಕೋರ್ಟ್ ನೀಡಿದ್ದ ತಡೆಯಾಜ್ಞೆ ಪ್ರಶ್ನಿಸಿ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯನ್ನ ಹೈಕೋರ್ಟ್ ದ್ವಿಸದಸ್ಯ ಪೀಠ ವಜಾಗೊಳಿಸಿದೆ. ಏಕಸದಸ್ಯ ಪೀಠದಲ್ಲೇ ಇದನ್ನ ಇತ್ಯರ್ಥ ಮಾಡಿಕೊಳ್ಳಿ ಎಂದು ಧಾರವಾಡದ ವಿಭಾಗೀಯ ಪೀಠ ತಿಳಿಸಿದ್ದು, ರಾಜ್ಯ ಸರ್ಕಾರಕ್ಕೆ ಮತ್ತೆ ಹಿನ್ನಡೆಯಾಗಿದೆ.
ಸಾರ್ವಜನಿಕ ಸ್ಥಳಗಳಲ್ಲಿ ಮತ್ತು ಸರ್ಕಾರಿ ಜಾಗಗಳಲ್ಲಿ RSS ಚಟುವಟಿಕೆಗಳನ್ನು ನಿರ್ಬಂಧಿಸುವ ಬಗ್ಗೆ ರಾಜ್ಯ ಸರ್ಕಾರ ಇತ್ತೀಚೆಗೆ ಆದೇಶ ಹೊರಡಿಸಿತ್ತು. ಈ ಆದೇಶಕ್ಕೆ ಏಕ ಸದಸ್ಯ ಪೀಠ ತಡೆಯಾಜ್ಞೆ ತಂದಿತ್ತು. ಇದನ್ನು ಪ್ರಶ್ನಿಸಿ ಸರ್ಕಾರ ಹೈಕೋರ್ಟ್ ದ್ವಿಸದಸ್ಯ ಪೀಠದ ಮೊರೆ ಹೋಗಿತ್ತು.
ಸರ್ಕಾರದ ಸ್ವತ್ತುಗಳಿಗೆ ಹಾನಿಯಾಗಬಾರದೆಂಬ ಉದ್ದೇಶದಿಂದಲೇ ನಿರ್ಬಂಧ ವಿಧಿಸಲಾಗಿದೆ. ಖಾಸಗಿ ಸಂಸ್ಥೆಗಳು ಸರ್ಕಾರಕ್ಕೆ ಸಂಬಂಧಿಸಿದ ಆಸ್ತಿಯಲ್ಲಿ ಅನುಮತಿಯಿಲ್ಲದೆ ಯಾವುದೇ ಕಾರ್ಯಕ್ರಮ ನಡೆಸುವಂತಿಲ್ಲ. ಹೈಕೋರ್ಟ್ ಕಟ್ಟಡ ಖಾಲಿ ಇದೆ ಎಂದು ಅಲ್ಲಿ ಕಾರ್ಯಕ್ರಮ ಮಾಡಲಾಗುವುದಿಲ್ಲ. ಅದೇ ರೀತಿಯಲ್ಲಿ ಸಾರ್ವಜನಿಕ ಸ್ಥಳಗಳ ಬಳಕೆಗೂ ಅನುಮತಿ ಅಗತ್ಯ ಎಂದು ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಸರ್ಕಾರದ ಪರ ವಾದ ಮಂಡಿಸಿದ್ದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಪ್ರತಿವಾದಿ ಪರ ಹಿರಿಯ ವಕೀಲರಾದ ಅಶೋಕ್ ಹಾರನಹಳ್ಳಿ, ಪಾರ್ಕ್, ಮೈದಾನ ಎಲ್ಲವೂ ಸರ್ಕಾರದ ಸ್ವತ್ತೆಂದು ಭಾವಿಸಬಾರದು. ಮೈದಾನದಲ್ಲಿ ಕ್ರಿಕೆಟ್ ಆಡಲೂ ಅನುಮತಿ ಬೇಕೆಂಬಂತೆ ನಿಯಮ ತರಲಾಗಿದೆ. ಪೊಲೀಸ್ ಕಾಯ್ದೆಯ ಪ್ರಕಾರ ಕ್ರಮ ಕೈಗೊಳ್ಳುವ ಅಧಿಕಾರ ಜಿಲ್ಲಾ ದಂಡಾಧಿಕಾರಿಗೆ ಮಾತ್ರವಿದೆ. ಏಕಸದಸ್ಯ ಪೀಠದಲ್ಲೇ ತಡೆಯಾಜ್ಞೆ ತೆರವಿಗೆ ಅರ್ಜಿ ಸಲ್ಲಿಸಬಹುದಿತ್ತು ಎಂದಿದ್ದರು. ನವೆಂಬರ್ 4ರಂದು ಈ ವಿಚಾರವಾಗಿ ಪರ-ವಿರೋಧ ವಾದ ಆಲಿಸಿದ್ದ ಧಾರವಾಡದ ವಿಭಾಗೀಯ ಪೀಠ, ತೀರ್ಪನ್ನು ಇಂದಿಗೆ ಕಾಯ್ದಿರಿಸಿತ್ತು. ಇದೀಗ ಆದೇಶ ಹೊರಬಿದ್ದಿದ್ದು, ಸರ್ಕಾರ ಅರ್ಜಿ ವಜಾಗೊಂಡಿದೆ. ಸರ್ಕಾರಕ್ಕೆ ಮುಖಭಂಗವಾಗಿದೆ.
ಇದನ್ನೂ ಓದಿ : BTV ಬಿಗ್ ಇಂಪ್ಯಾಕ್ಟ್ – ಕಾರಿಗೆ ಅಡ್ಡಗಟ್ಟಿ ರಾಡ್ನಿಂದ ಹಲ್ಲೆ ಮಾಡಿದ್ದ ಪುಂಡರ ಮೇಲೆ FIR, ಓರ್ವ ಆರೋಪಿ ಅರೆಸ್ಟ್!







