ಬೆಂಗಳೂರು : ಎಣ್ಣೆ ಹೊಡೆದು ಬಂದ ಚಾಲಕರಿಗೆ ಬಸ್ ಚಾಲನೆ ಮಾಡಲು ಅವಕಾಶ ನೀಡಿದ ಆರೋಪದ ಮೇಲೆ BMTC ಯ ಒಟ್ಟು 9 ಅಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನು ಅಮಾನತು ಮಾಡಲಾಗಿದೆ. ಬೆಂಗಳೂರಿನ ಸೀಗೆಹಳ್ಳಿ ಡಿಪೋ 35ಕ್ಕೆ ಸೇರಿದ ಘಟಕ ವ್ಯವಸ್ಥಾಪಕರು, ಸೂಪರ್ ವೈಸರ್‌ಗಳು ಸೇರಿದಂತೆ 9 ಸಿಬ್ಬಂದಿಗಳ ವಿರುದ್ಧ ಈ ಕ್ರಮ ಕೈಗೊಳ್ಳಲಾಗಿದೆ.
ಭದ್ರತಾ ವಿಭಾಗದ ಅಧಿಕಾರಿಗಳಾದ ಶಿವಪ್ರಸಾದ್ ಮತ್ತು ರಮ್ಯ ಅವರು ನೀಡಿದ ವರದಿಯ ಆಧಾರದ ಮೇಲೆ ಬಿಎಂಟಿಸಿ ಆಡಳಿತ ಮಂಡಳಿಯು ಈ ಅಮಾನತು ಆದೇಶ ಹೊರಡಿಸಿದೆ. ಇದೀಗ ಅಧಿಕಾರಿಗಳಾದ ಶಿವಪ್ರಸಾದ್, ರಮ್ಯ ವಿರುದ್ಧ ಡಿಪೋದ ಸಿಬ್ಬಂದಿಗಳು ಆಕ್ರೋಶ ಹೊರಹಾಕಿದ್ದಾರೆ.
ಭದ್ರತಾ ಅಧಿಕಾರಿಗಳು ರಕ್ತಪರೀಕ್ಷೆ ಮಾಡಿಸದೇ, ಕೇವಲ ಅನುಮಾನದ ಮೇಲೆ ತಪ್ಪು ವರದಿ ನೀಡಿ ಚಾಲಕರ ಅಮಾನತಿಗೆ ಶಿಫಾರಸು ಮಾಡಿದ್ದಾರೆ ಎಂದು ಸಿಬ್ಬಂದಿ ಗಂಭೀರ ಆರೋಪ ಮಾಡಿದ್ದಾರೆ. ಚಾಲಕರ ಉಸಿರು ತಪಾಸಣೆಗಾಗಿ ಬಳಸಿದ ಬ್ರೀಥ್ ಅನಲೈಸರ್ ಯಂತ್ರದ ಲೋಪದ ಬಗ್ಗೆಯೂ ಸಿಬ್ಬಂದಿ ಅನುಮಾನ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಹೈಕೋರ್ಟ್ ಕೂಡ ಉಸಿರು ತಪಾಸಣೆ ಯಂತ್ರ ಪರೀಕ್ಷೆಗೆ ಸೂಕ್ತವಲ್ಲ ಎಂದು ಅಭಿಪ್ರಾಯಪಟ್ಟಿರುವ ಹಿನ್ನೆಲೆಯಲ್ಲಿ, ಕೇವಲ ಪ್ರಚಾರಕ್ಕಾಗಿ ಅಮಾನತಿಗೆ ಶಿಫಾರಸು ಮಾಡಲಾಗಿದೆ ಎಂದು ಸಿಬ್ಬಂದಿಗಳು ಆರೋಪಿಸಿದ್ದಾರೆ.
ಮದ್ಯಪಾನದ ಆರೋಪ ಹೊತ್ತಿರುವ ಚಾಲಕರಿಂದ ಈವರೆಗೂ ಯಾವುದೇ ಅಪಘಾತಗಳು ಸಂಭವಿಸಿಲ್ಲ ಎಂದು ವರದಿಯಾಗಿದೆ. ಈ ಎಲ್ಲ ಕಾರಣಗಳಿಂದಾಗಿ, ಭದ್ರತಾ ಅಧಿಕಾರಿಗಳಾದ ಶಿವಪ್ರಕಾಶ್ ಮತ್ತು ರಮ್ಯ ಅವರ ವಿರುದ್ಧ ಬಿಎಂಟಿಸಿ ಸಿಬ್ಬಂದಿಗಳಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ.
ಇದನ್ನೂ ಓದಿ : ರಾಜ್ಯ ಪೊಲೀಸ್ ಇಲಾಖೆಯಲ್ಲಿ ಮೇಜರ್ ಸರ್ಜರಿ – 120 ಇನ್ಸ್‌ಪೆಕ್ಟರ್‌ಗಳ ವರ್ಗಾವಣೆ.. ಹಲವು ದಿನಗಳ ಕಾಯುವಿಕೆ ಅಂತ್ಯ!







