ಬೆಂಗಳೂರಿನಲ್ಲಿ ಭೀಕರ ಘಟನೆ – ಮಾಂಗಲ್ಯ ಸರಕ್ಕಾಗಿ ಉಸಿರುಗಟ್ಟಿಸಿ ವೃದ್ಧೆಯ ಕೊಲೆ!

ಬೆಂಗಳೂರು : ಮಾಂಗಲ್ಯ ಸರಕ್ಕಾಗಿ ವೃದ್ಧೆಯೊಬ್ಬರನ್ನು ಉಸಿರುಗಟ್ಟಿಸಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಉತ್ತರಹಳ್ಳಿಯ ನ್ಯೂ ಮಿಲಿನಿಯಂ ಸ್ಕೂಲ್ ರಸ್ತೆಯಲ್ಲಿ ನಡೆದಿದೆ. 65 ವರ್ಷದ ಶ್ರೀಲಕ್ಷ್ಮಿ ಕೊಲೆಯಾದ ವೃದ್ಧೆ.

ಪರಿಚಿತ ವ್ಯಕ್ತಿಯಿಂದಲೇ ಈ ಕೃತ್ಯ ನಡೆದಿರುವ ಶಂಕೆ ವ್ಯಕ್ತವಾಗಿದೆ. ಶ್ರೀಲಕ್ಷ್ಮಿ ಅವರ ಪತಿ ಅಶ್ವತ್ಥ ನಾರಾಯಣ್ ಅವರು ನ.4 ರಂದು ಬೆಳಿಗ್ಗೆ 9.30ಕ್ಕೆ ಕೆಲಸಕ್ಕೆ ಹೋಗಿದ್ದರು. ಮಧ್ಯಾಹ್ನ 2.15 ಗಂಟೆಗೆ ಅಶ್ವತ್ಥ ನಾರಾಯಣ್ ಅವರು ಪತ್ನಿಗೆ ಕರೆ ಮಾಡಿದ್ದರೂ, ಶ್ರೀಲಕ್ಷ್ಮಿ ಕರೆ ಸ್ವೀಕರಿಸಿರಲಿಲ್ಲ.

ಪತ್ನಿ ಫೋನ್ ಕರೆ ಸ್ವೀಕರಿಸದಿದ್ದಕ್ಕೆ ಅನುಮಾನಗೊಂಡು ಸಂಜೆ 5.30ಕ್ಕೆ ಅಶ್ವತ್ಥ ನಾರಾಯಣ್ ತಮ್ಮ ಮನೆ ಬಾಡಿಗೆದಾರ ಫಣಿರಾಜ್ ಅವರಿಗೆ ಕರೆ ಮಾಡಿ, ನನ್ನ ಹೆಂಡತಿ ಶ್ರೀಲಕ್ಷ್ಮೀ ಮಧ್ಯಾಹ್ನದಿಂದ ಫೋನ್ ತೆಗೆಯುತ್ತಿಲ್ಲ ಹೋಗಿ ನೋಡುವಂತೆ ಹೇಳಿದರು. ಈ ವೇಳೆ ಫಣಿರಾಜ್ ತಾನು ಸಹ ಹೊರಗಡೆ ಇದ್ದೇನೆ, ತನ್ನ ಹೆಂಡತಿಗೆ ತಿಳಿಸುವುದಾಗಿ ಹೇಳಿದ್ದ. ಸಂಜೆ 6 ಗಂಟೆಗೆ ಫಣಿರಾಜ್, ಅಶ್ವತ್ಥ ನಾರಾಯಣ್‌ಗೆ ಕರೆ ಮಾಡಿ, ನಿಮ್ಮ ಹೆಂಡತಿ ಶ್ರೀಲಕ್ಷ್ಮಿ ನೆಲದ ಮೇಲೆ ಬಿದ್ದಿದ್ದಾರೆ, ಉಸಿರಾಡುತ್ತಿಲ್ಲ ಎಂದು ತಿಳಿಸಿದ್ದಾರೆ.

ಈ ಸುದ್ದಿ ತಿಳಿದ ತಕ್ಷಣವೇ ಓಡೋಡಿ ಬಂದ ಅಶ್ವತ್ಥ ನಾರಾಯಣ್ ಅವರು ಪತ್ನಿಯನ್ನು ನೋಡಿದಾಗ, ಶ್ರೀಲಕ್ಷ್ಮಿ ಅವರು ನೆಲದ ಮೇಲೆ ಬಿದ್ದಿದ್ದು ಉಸಿರಾಡುತ್ತಿರಲಿಲ್ಲ. ನಂತರ ಅವರನ್ನು ಬೆಡ್ ಮೇಲೆ ಮಲಗಿಸಿ ನೋಡಿದಾಗ ಗಾಯದ ಗುರುತುಗಳು ಪತ್ತೆಯಾಗಿವೆ. ಮೃತ ಶ್ರೀಲಕ್ಷ್ಮಿ ಅವರ ಕುತ್ತಿಗೆಯ ಬಲಭಾಗ ಮತ್ತು ತುಟಿಯ ಮೇಲೆ ಗಾಯದ ಗುರುತುಗಳಿತ್ತು. ಜೊತೆಗೆ, ಕುತ್ತಿಗೆಯಲ್ಲಿದ್ದ ಮಾಂಗಲ್ಯ ಸರವು ಕಾಣೆಯಾಗಿತ್ತು. ಕೊಲೆಗಡುಕರು ವೃದ್ಧೆಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿ, ಮಾಂಗಲ್ಯ ಸರ ಕಿತ್ತುಕೊಂಡು ಹೋಗಿದ್ದಾರೆ ಎಂದು ಶಂಕಿಸಲಾಗಿದೆ.

ಪತಿ ಅಶ್ವತ್ಥ ನಾರಾಯಣ್ ಅವರು ಈ ಸಂಬಂಧ ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಕೊಲೆಗಾರರ ಪತ್ತೆಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಇದನ್ನೂ ಓದಿ : ರಾಘು ಶಿವಮೊಗ್ಗ ನಿರ್ದೇಶನದ ‘ದಿ ಟಾಸ್ಕ್’ಗೆ ಧ್ರುವ ಸರ್ಜಾ ಸಾಥ್!

Btv Kannada
Author: Btv Kannada

Read More