ಬಾಗಲಕೋಟೆ : ಬಾಗಲಕೋಟೆ ಕಾಂಗ್ರೆಸ್ ಹಿರಿಯ ಶಾಸಕ, ಮಾಜಿ ಸಚಿವ ಹೆಚ್.ವೈ ಮೇಟಿ(78) ಇಂದು ಕೊನೆಯುಸಿರೆಳೆದಿದ್ದಾರೆ.

ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಶಾಸಕ ಹೆಚ್ ವೈ ಮೇಟಿ ನಿಧನರಾಗಿದ್ದಾರೆ. ಅನಾರೋಗ್ಯದಿಂದಾಗಿ ಶಾಸಕ ಹೆಚ್ ವೈ ಮೇಟಿ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಇದೀಗ ಚಿಕಿತ್ಸೆ ಫಲಿಸದೆ ಹೆಚ್ ವೈ ಮೇಟಿ ಸಾವನ್ನಪ್ಪಿದ್ದಾರೆ.
ಹೆಚ್.ವೈ.ಮೇಟಿ ಅವರು ಅಕ್ಟೋಬರ್ 9, 1946 ರಲ್ಲಿ ಜನಿಸಿದ್ದರು. ಅವರು ಐದು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. 3 ಬಾರಿ ಗುಳೇದ ಗುಡ್ಡ ಕ್ಷೇತ್ರದಿಂದ ಶಾಸಕರಾಗಿದ್ದರು. ಇನ್ನು ಹೆಚ್.ವೈ ಮೇಟಿ 2 ಬಾರಿ ಬಾಗಲಕೋಟೆ ಕ್ಷೇತ್ರದಿಂದ ಶಾಸಕರಾಗಿ ಸೇವೆ ಸಲ್ಲಿಸಿದ್ದಾರೆ. 2016ರಲ್ಲಿ ವಿವಾದ ಹಿನ್ನೆಲೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಇಂದು ರಾತ್ರಿಯೇ ಹೆಚ್.ವೈ.ಮೇಟಿ ಅವರ ಮೃತದೇಹ ಬಾಗಲಕೋಟೆಗೆ ರವಾನೆ ಮಾಡಲಾಗುತ್ತೆ. ಜಿಲ್ಲಾ ಕ್ರೀಡಾಂಗಣದಲ್ಲಿ ಪಾರ್ಥಿವ ಶರೀರದ ದರ್ಶನಕ್ಕೆ ನೀಡಲಾಗುತ್ತದೆ. ನಂತರ ನಾಳೆ ಬೆಳಗ್ಗೆ ತಿಮ್ಮಾಪುರ ಗ್ರಾಮಕ್ಕೆ ಪಾರ್ಥಿವ ಶರೀರ ರವಾನಿಸಲಾಗುತ್ತದೆ. ಮಾಜಿ ಸಚಿವ ಹೆಚ್.ವೈ.ಮೇಟಿ ಅವರ ಸ್ವಂತ ಊರಿನಲ್ಲಿ ನಾಳೆ ಲಿಂಗಾಯತ ಧಾರ್ಮಿಕ ವಿಧಿವಿಧಾನದ ಪ್ರಕಾರ ಅಂತ್ಯಕ್ರಿಯೆ ನಡೆಯಲಿದೆ. ಮೇಟಿ ಅಂತ್ಯಕ್ರಿಯೆಗೆ ಸಿಎಂ ಸಿದ್ದರಾಮಯ್ಯ ಸೇರಿ ಹಲವರು ಭಾಗಿಯಾಗಲಿದ್ದಾರೆ.
ಇದನ್ನೂ ಓದಿ : ಬಿಹಾರ ಚುನಾವಣೆ ಬಳಿಕ ದೆಹಲಿಗೆ ಸಿಎಂ ಸಿದ್ದರಾಮಯ್ಯ – ಸಂಪುಟ ಪುನಾರಚನೆ ಕುರಿತು ‘ಕೈ’ ಹೈಕಮಾಂಡ್ ಜೊತೆ ಮಹತ್ವದ ಚರ್ಚೆ!







