ಬಾಡಿಗೆ ಮನೆ ಕೇಳುವ ನೆಪದಲ್ಲಿ ಒಂಟಿ ಮನೆಗೆ ನುಗ್ಗಿದ ಖತರ್ನಾಕ್ ಗ್ಯಾಂಗ್ – ವೃದ್ಧೆಗೆ ಮಾರಣಾಂತಿಕ ಹಲ್ಲೆ, ಚಿನ್ನಾಭರಣ ದೋಚಿ ಎಸ್ಕೇಪ್!

ಮೈಸೂರು : ನಂಜನಗೂಡು ಜನರೇ ಎಚ್ಚರ.. ಸ್ವಲ್ಪ ಯಾಮಾರಿದ್ರು ನಿಮ್ಮ ಜೀವಕ್ಕೆ ಅಪಾಯ ಎದುರಾಗಬಹುದು. ಬಾಡಿಗೆ ಮನೆ ಕೇಳುವ ನೆಪದಲ್ಲಿ ಒಬ್ಬಂಟಿ ಮನೆಗೆ ನುಗ್ಗಿದ ಖತರ್ನಾಕ್ ಗ್ಯಾಂಗ್, ವಯಸ್ಸಾದ ಮಹಿಳೆ ಎಂದು ಲೆಕ್ಕಿಸದೆ ಹಿಗ್ಗಾಮುಗ್ಗಾ ಹಲ್ಲೆ ನಡೆಸಿ, ಚಿನ್ನಾಭರಣ ದೋಚಿ ಪರಾರಿಯಾಗಿರುವ ಆಘಾತಕಾರಿ ಘಟನೆ ನಂಜನಗೂಡಿನಲ್ಲಿ ನಡೆದಿದೆ.

ಈ ಘಟನೆ ನಂಜನಗೂಡು ಪಟ್ಟಣದ ದೇವಿರಮ್ಮನ ಹಳ್ಳಿ ಬಡಾವಣೆ ಸಮೀಪದ ಸಾಯಿಬಾಬ ದೇವಾಲಯದ ಬಳಿ ನಡೆದಿದೆ. ದ್ರಾಕ್ಷಾಯಿಣಿ (65 ವರ್ಷ), ಮೂರು ಅಂತಸ್ತಿನ ಮನೆಯಲ್ಲಿ ಮಗ ಮತ್ತು ಸೊಸೆಯೊಂದಿಗೆ ವಾಸವಿದ್ದರು. ನಿನ್ನೆ ಸುಮಾರು ಮಧ್ಯಾಹ್ನ 2 ಗಂಟೆಗೆ ಅಪರಿಚಿತರ ಗ್ಯಾಂಗ್ ಬಾಡಿಗೆ ಮನೆ ಕೇಳುವ ನೆಪದಲ್ಲಿ ದ್ರಾಕ್ಷಾಯಿಣಿ ಅವರ ಒಂಟಿ ಮನೆಗೆ ಪ್ರವೇಶಿಸಿದೆ. ಮನೆಯ ಮೂರನೇ ಮಹಡಿಗೆ ತೆರಳಿ ಮನೆ ತೋರಿಸುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ದ್ರಾಕ್ಷಾಯಿಣಿ ಅವರನ್ನು ಹಿಡಿದು ಬಾಗಿಲು ಬಂದ್ ಮಾಡಿದ್ದಾರೆ. ಆಕೆ ಬಾಯಿ ಬಿಡದಂತೆ ಮುಖ ಮತ್ತು ದೇಹದ ಇತರೆ ಭಾಗಗಳಿಗೆ ಗಂಭೀರವಾಗಿ ಹಲ್ಲೆ ಮಾಡಿದ್ದಾರೆ.

ನಟೋರಿಯಸ್ ಗ್ಯಾಂಗ್ ನಡೆಸಿದ ಭೀಕರ ಹಲ್ಲೆಯಿಂದಾಗಿ ದ್ರಾಕ್ಷಾಯಿಣಿ ಅವರು ಕೋಮಾ ಸ್ಥಿತಿಗೆ ತಲುಪಿದ್ದಾರೆ. ತಕ್ಷಣವೇ ಅವರನ್ನು ಮೈಸೂರಿನ ಖಾಸಗಿ ಅಪೋಲೋ ಆಸ್ಪತ್ರೆಯ ತುರ್ತು ಘಟಕಕ್ಕೆ ದಾಖಲಿಸಲಾಗಿದ್ದು, ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ದ್ರಾಕ್ಷಾಯಿಣಿ ಅವರಿಂದ ಬೆಲೆಬಾಳುವ ಚಿನ್ನದ ಸರ, ಕೈಗೆ ಅಳವಡಿಸಿಕೊಂಡಿದ್ದ ಎರಡು ಚಿನ್ನದ ಬಳೆಗಳು ಸೇರಿದಂತೆ ಆಭರಣ ಮತ್ತು ಹಣವನ್ನು ನಟೋರಿಯಸ್ ಗ್ಯಾಂಗ್ ದೋಚಿಕೊಂಡು ಹೋಗಿದೆ. ಹಾಡು ಹಗಲೇ ನಡೆದಿರುವ ಈ ಘಟನೆ ಕೇಳಿ ನಂಜನಗೂಡು ಜನತೆ ಬೆಚ್ಚಿಬಿದ್ದಿದ್ದಾರೆ. ಒಂಟಿ ಮನೆಗಳಲ್ಲಿ ವಾಸಿಸುವ ವೃದ್ಧರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ.

ಈ ಸಂಬಂಧ ನಂಜನಗೂಡು ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಡಿವೈಎಸ್ಪಿ ರಘು ಹಾಗೂ ವೃತ್ತ ನಿರೀಕ್ಷಕ ರವೀಂದ್ರ ಅವರ ನೇತೃತ್ವದಲ್ಲಿ ಸ್ಥಳ ಪರಿಶೀಲನೆ ನಡೆಸಲಾಗಿದೆ. ಮೈಸೂರು ಎಸ್ಪಿ ವಿಷ್ಣುವರ್ಧನ್ ಅವರ ಆದೇಶದ ಮೇರೆಗೆ, ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ನಾಗೇಶ್ ಅವರು ಆರೋಪಿಗಳ ಬಂಧನಕ್ಕಾಗಿ ಎರಡು ವಿಶೇಷ ತಂಡಗಳನ್ನು ರಚಿಸಿದ್ದಾರೆ. ಒಬ್ಬಂಟಿ ಮನೆಗೆ ಹಾಡು ಹಗಲೇ ನುಗ್ಗಿ ದಾಂದಲೆ ಮಾಡಿ ಚಿನ್ನಾಭರಣ ದೋಚಿರುವ ಖದೀಮರನ್ನು ಶೀಘ್ರದಲ್ಲೇ ಬಂಧಿಸುತ್ತೇವೆ ಎಂದು ಪೊಲೀಸ್ ಇಲಾಖೆ ಜನತೆಗೆ ಭರವಸೆ ನೀಡಿದೆ.

ಇದನ್ನೂ ಓದಿ : ಸಾವಿನಲ್ಲೂ ಒಂದಾದ ದಂಪತಿ – ಪತಿಯ ಸಾವಿನ ಸುದ್ದಿ ಕೇಳಿ ಹೃದಯಾಘಾತದಿಂದ ಪತ್ನಿ ಸಾವು!

Btv Kannada
Author: Btv Kannada

Read More