ಬೆಂಗಳೂರು : ನಗರದಲ್ಲಿ ಪಾರಿವಾಳಗಳ ಸಂಖ್ಯೆ ವಿಪರೀತ ಹೆಚ್ಚಳವಾಗುತ್ತಿರುವುದರಿಂದ ಶ್ವಾಸಕೋಶದ ಸಮಸ್ಯೆ ಹೆಚ್ಚಾಗುತ್ತಿರುವ ಬಗ್ಗೆ ಮಾಜಿ ಸಚಿವ, ಹಾಲಿ ರಾಜಾಜಿನಗರ ಬಿಜೆಪಿ ಶಾಸಕ ಸುರೇಶ್ ಕುಮಾರ್ ಆತಂಕ ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ಮಾಜಿ ಸಚಿವ ಸುರೇಶ್ ಕುಮಾರ್ ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ಪತ್ರ ಬರೆದು ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. ಪತ್ರದಲ್ಲಿ ಅವರು, ಬೆಂಗಳೂರಿನ ವಿವಿಧ ಉದ್ಯಾನವನಗಳಲ್ಲಿ ಮತ್ತು ಇನ್ನೂ ಕೆಲವು ಬಯಲು ಪ್ರದೇಶಗಳಲ್ಲಿ ಪಾರಿವಾಳಗಳಿಗೆ ಧಾನ್ಯಗಳನ್ನು ನೀಡುವ ದಾನಿಗಳು ಕಾರ್ಯೋನ್ಮುಖರಾಗಿದ್ದಾರೆ. ಅವರ ಹೃದಯವಂತಿಕೆ ನಿಜಕ್ಕೂ ಶ್ಲಾಘನೀಯ ಎಂದಿದ್ದಾರೆ.

ಆದರೆ, ಈ ಪಾರಿವಾಳಗಳ ಸಂಖ್ಯೆ ವಿಪರೀತ ಮಟ್ಟದಲ್ಲಿ ಹೆಚ್ಚಾಗುತ್ತಿರುವುದರಿಂದ ನಾಗರಿಕರಿಗೆ ಶ್ವಾಸಕೋಶದ ಸಮಸ್ಯೆ ಹೆಚ್ಚಾಗುತ್ತಿರುವ ಬಗ್ಗೆ ಅನೇಕ ವೈದ್ಯಕೀಯ ವರದಿಗಳು ಮಾಧ್ಯಮಗಳಲ್ಲಿ ಪ್ರಕಟವಾಗಿವೆ. ಇದರಿಂದ ದಿನನಿತ್ಯ ಉದ್ಯಾನವನಗಳಲ್ಲಿ ವಾಕಿಂಗ್ ಹೋಗುವವರು, ವ್ಯಾಯಾಮ ಮಾಡುವವರು ಸಹಜವಾಗಿ ಆತಂಕಕ್ಕೆ ಈಡಾಗಿದ್ದಾರೆ ಮತ್ತು ಈ ಬಗ್ಗೆ ನನಗೆ ಮನವಿಗಳನ್ನು ನೀಡಿದ್ದಾರೆ ಎಂದು ತಿಳಿಸಿದ್ದಾರೆ.

ಈ ಕುರಿತು ನಾಗರೀಕರ ಆರೋಗ್ಯಕ್ಕೆ ದಕ್ಕೆ ಆಗದ ರೀತಿಯಲ್ಲಿ ಏನು ಕ್ರಮ ಕೈಗೊಳ್ಳಬೇಕು ಎಂಬುದರ ಬಗ್ಗೆ ನೀವು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮಟ್ಟದಲ್ಲಿ ಒಂದು ತೀರ್ಮಾನ ಕೈಗೊಳ್ಳಬೇಕು ಎಂದು ಸುರೇಶ್ ಕುಮಾರ್ ಕೋರಿದ್ದಾರೆ.
ಇದನ್ನೂ ಓದಿ : ಬಹುನಿರೀಕ್ಷಿತ ಪಿಂಕ್ ಲೈನ್ ಮೆಟ್ರೋ 2026ರ ಮೇ ತಿಂಗಳಿಗೆ ಸಂಚಾರ ಮುಕ್ತ!







