ನೆಲಮಂಗಲ : ದೇವಾಲಯದ ಗೇಟ್ ಬಿದ್ದು 11 ವರ್ಷದ ಬಾಲಕನ ಕಾಲು ಮುರಿದಿರುವ ಘಟನೆ ನೆಲಮಂಗಲದಲ್ಲಿ ನಡೆದಿದೆ. ಮುಜರಾಯಿ ಇಲಾಖೆಯ ನಿರ್ಲಕ್ಷ್ಯದಿಂದಾಗಿ ಈ ದುರಂತ ಸಂಭವಿಸಿದೆ.

ಅರಸೀಕೆರೆ ಮೂಲದ ದಂಪತಿ ಕಳೆದ 13 ವರ್ಷಗಳಿಂದ ಮಾಕಳಿಯಲ್ಲಿ ವಾಸವಾಗಿದ್ದು, ಕ್ಯಾಬ್ ಚಾಲಕ ಕುಮಾರ್ ನಾಯಕ್ ಮತ್ತು ಭಾರತಿ ದಂಪತಿಯ ಪುತ್ರನಾದ ಲೋಹಿತ್ ನಾಯಕ್, ಮಾಕಳಿ ಗ್ರಾಮದ ಬೈಲಾಂಜನೇಯ ಸ್ವಾಮಿ ದೇವಸ್ಥಾನದ ಬಳಿ ಆಟವಾಡಲು ತೆರಳಿದ್ದ. ಈ ವೇಳೆ ಅಸುರಕ್ಷಿತ ಸ್ಥಿತಿಯಲ್ಲಿದ್ದ ದೇವಸ್ಥಾನದ ಮುಖ್ಯ ಗೇಟ್ ಆಕಸ್ಮಿಕವಾಗಿ ಬಾಲಕನ ಕಾಲಿನ ಮೇಲೆ ಬಿದ್ದಿದೆ. ಇದರ ಪರಿಣಾಮವಾಗಿ, ಲೋಹಿತ್‌ನ ತೊಡೆ ಭಾಗದ ಮೂಳೆ ಸಂಪೂರ್ಣವಾಗಿ ಮುರಿದಿದ್ದು, ಕೂಡಲೇ ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಮುಜರಾಯಿ ಇಲಾಖೆಯ ಅಧಿಕಾರಿಗಳು ಅಥವಾ ಸ್ಥಳೀಯ ಆಡಳಿತದ ಪ್ರತಿನಿಧಿಗಳು ಆಸ್ಪತ್ರೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವಾನ ಹೇಳಲು ಬಂದಿಲ್ಲ. ಅಧಿಕಾರಿಗಳ ಈ ನಿರ್ದಯಿ ಮತ್ತು ನಿರ್ಲಕ್ಷ್ಯದ ಧೋರಣೆಯ ವಿರುದ್ಧ ಲೋಹಿತ್‌ನ ಕುಟುಂಬಸ್ಥರು ಮತ್ತು ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂತಹ ದುರ್ಘಟನೆ ನಡೆದ ಮೇಲೆಯೂ ಅಧಿಕಾರಿಗಳು ಇತ್ತ ಸುಳಿದಿಲ್ಲ ಈ ಕುರಿತು ಸೂಕ್ತ ತನಿಖೆ ನಡೆಸಿ, ಬಾಲಕನಿಗೆ ನ್ಯಾಯ ಒದಗಿಸಬೇಕು ಎಂದು ಕುಟುಂಬಸ್ಥರು ಆಗ್ರಹಿಸಿದ್ದಾರೆ.

ಇದನ್ನೂ ಓದಿ : ಕಲಬುರಗಿಯಲ್ಲಿ ಸ್ನೇಹಿತರಿಂದಲೇ ಸ್ನೇಹಿತನ ಬರ್ಬರ ಹತ್ಯೆ – ಕಲ್ಲಿನಿಂದ ಜಜ್ಜಿ ಯುವಕನ ಕೊಲೆ!







